ಬೆಂಗಳೂರು : ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಅದೇ ರೀತಿ ದಾಸರಹಳ್ಳಿ ಕ್ಷೇತ್ರದಲ್ಲಿಯೂ ಕೊರೋನಾ ಸೋಂಕಿತರ ಸಂಖ್ಯೆ ಮೂರಂಕಿ ತಲುಪಿದೆ. ಈ ಹಿನ್ನೆಲೆ ಕೊರೋನಾ ಸೋಂಕಿತರಿಗೆ ಯಾವುದೇ ಅನಾನುಕೂಲ ಆಗಬಾರದು ಅನ್ನುವ ಕಾರಣಕ್ಕೆ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ ಮಂಜುನಾಥ್ ಸುವ್ಯವಸ್ಥೆ ಕಲ್ಪಿಸಲು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ.

ಅದೇ ರೀತಿ, ಕ್ಷೇತ್ರದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಕಾರಣ ದಾಸರಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಶಾಸಕ ಆರ್ ಮಂಜುನಾಥ್ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಆ ಕ್ಷೇತ್ರದ ಆಸ್ಪತ್ರೆಯ ಮಾಲೀಕರು, ಆಡಳಿತಾಧಿಕಾರಿಗಳು, ದಾಸರಹಳ್ಳಿ ಕ್ಷೇತ್ರದ ಜಂಟಿ ಆಯುಕ್ತರು ಹಾಗೂ ಉನ್ನತ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಶಾಸಕರು ಕರೆದ ಈ ಸಭೆಯಲ್ಲಿ ಕೊರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಿಂದ ಯಾವ ರೀತಿ ನೆರವು ಸಿಗಬಹುದು ಅನ್ನುವುದರ ಕುರಿತಾಗಿ ಚರ್ಚೆ ನಡೆಸಲಾಯಿತು. ವಿಶೇಷವಾಗಿ ದಾಸರಹಳ್ಳಿ ಕ್ಷೇತ್ರದ ಜನತೆಗೆ ಅಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50 ರಷ್ಟು ಬೆಡ್‍ಗಳನ್ನು ಕಾಯ್ದಿರಿಸುವಂತೆ ಈ ಸಭೆಯಲ್ಲಿ ಶಾಸಕರು ಆಸ್ಪತ್ರೆ ಆಡಳಿತಾಧಿಕಾರಿಗಳಿಗೆ ಸೂಚಿಸಿದ್ದಾರೆ

ಇನ್ನು ಕ್ಷೇತ್ರದ ಕೊರೋನಾ ಸೋಂಕಿತರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ಶಾಸಕರು ಸಹಾಯವಾಣಿ ವ್ಯವಸ್ಥೆ ಕಲ್ಪಿಸಿದ್ದಾರೆ. 08029590057, 080256359606, 08029635904 ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಕೊರೋನಾ ಸಂಬಂಧಿತ ದೂರುಗಳನ್ನು ಹೇಳಬಹುದು. ಕೊರೋನಾ ಸಂಬಂಧಿತ ಯಾವುದೇ ದೂರು ದುಮ್ಮಾನಗಳಿದ್ದರೂ ಈ ಸಂಖ್ಯೆಗೆ ಕರೆ ಮಾಡಬಹುದು, ಹಾಗೂ ಜನರ ಸಮಸ್ಯೆಗೆ ಆ ಕೂಡಲೇ ವಲಯ ಜಂಟಿ ಆಯುಕ್ತರು, ಹಾಗೂ ಅಧಿಕಾರಿಗಳು ಸ್ಪಂದಿಸಬೇಕು ಎಂದು ಶಾಸಕರು ಸೂಚಿಸಿದ್ದಾರೆ

ಅದೇ ರೀತಿ ಕ್ಷೇತ್ರದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದ್ದು, ಜನರು ನಿಶ್ಚಿಂತೆಯಿಂದ ಮನೆಯಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಸದಾ ಹುಮ್ಮಸ್ಸಿನಿಂದ ಕ್ಷೇತ್ರದ ಜನತೆಯ ಪರವಾಗಿ ಕೆಲಸ ಮಾಡುವ, ಜನರು ಯಾವ ಸಮಸ್ಯೆಗೂ ಒಳಗಾಗಬಾರದೆಂದು ಜನ ಸೇವೆಯಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿರುವ ಶಾಸಕ ಆರ್ ಮಂಜುನಾಥ್ ವರನ್ನು ಶ್ಲಾಘಿಸಲೇಬೇಕು.