ಲಕ್ನೋ: ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿ, ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್ ವಿಕಾಸ್ ದುಬೆಯನ್ನು ಎನ್‍ಕೌಂಟರ್ ಮಾಡಿದ್ದಾರೆ.
ಕಾನ್ಪುರ ಸಮೀಪ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಉತ್ತರಪ್ರದೇಶ ವಿಶೇಷ ಪೊಲೀಸ್ ಪಡೆ (ಎಸ್ ಟಿ ಎಫ್) ಈ ರೌಡಿಶೀಟರ್ ಅನ್ನು ಎನ್ ಕೌಂಟರ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಗುರುವಾರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲ್ಪಟ್ಟ ವಿಕಾಸ್ ದುಬೆಯನ್ನ ಇಂದು ಬೆಳಿಗ್ಗೆ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಉತ್ತರ ಪ್ರದೇಶದ ಎಸ್ ಟಿ ಎಫ್ ಪಡೆ ಕಾನ್ಪುರ ತಲುಪುತ್ತಿದ್ದಂತೆ, ಎಸ್ ಟಿ ಎಫ್ ಪಡೆಯ ವಾಹನವೊಂದು ಅಪಘಾತಕ್ಕೀಡಾಗಿ ಪಲ್ಟಿಯಾಗಿದೆ. ಈ ವೇಳೆ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಇದರ ಪರಿಣಾಮವಾಗಿ ಎನ್ ಕೌಂಟರ್ ಆರಂಭಿಸಲಾಗಿದೆ. ಈ ಘಟನೆ ಕಾನ್ಪುರದ ಸಚೆಂಡಿ ಗಡಿಯಲ್ಲಿ ನಡೆದಿದ್ದು. ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ವಿಕಾಸ್ ದುಬೆಯ ಅನುಚರರಾದ ಪ್ರಭಾತ್ ಮಿಶ್ರಾ, ಭವನ್ ಶುಕ್ಲಾರನ್ನು ಪೊಲೀಸರು ಕಾನ್ಪುರಕ್ಕೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಮಾರ್ಗ ಮಧ್ಯೆ ಪೊಲೀಸರಿಂದ ಪಿಸ್ತೂಲ್ ಕಸಿದುಕೊಂಡಿದ್ದ ಆರೋಪಿಗಳು ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ್ದರು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಶೂಟೌಟ್ ಮಾಡಿದ್ದ ಪರಿಣಾಮ ಆರೋಪಿಗಳು ಸಾವನ್ನಪ್ಪಿದ್ದಾರೆ ಎಂದು ಕಾನ್ಪೂರ ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದರು.
ವಿಕಾಸ್ ದುಬೆ ಸಾವನ್ನು ಉತ್ತರ ಪ್ರದೇಶ ಪೊಲೀಸರು ಈವರೆಗೆ ದೃಢಪಡಿಸಿಲ್ಲ. ಆದರೆ ಕೆಲ ಹಿಂದಿ ಸುದ್ದಿ ವಾಹಿನಿಗಳಲ್ಲಿ ವಿಕಾಸ್ ದುಬೆ ಪಾರ್ಥಿವ ಶರೀರವನ್ನು ತೋರಿಸಲಾಗಿದೆ.