ಹೈದರಾಬಾದ್: ಇಲ್ಲಿಯ ಶಂಶಾಬಾದ್ ನಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ನಿನ್ನೆ 25 ಕೋಟಿ ಮೌಲ್ಯದ 21 ಕಿಲೋ ಅಕ್ರಮ ಚಿನ್ನಾಭರಣಗಳನ್ನ ವಶಪಡಿಸಿಕೊಂಡಿದ್ದಾರೆ. ಈ ಗೋಲ್ಡ್ ಬಿಸ್ಕತ್ ಮತ್ತು ಆಭರಣಗಳಿಗೆ ಯಾವುದೇ ದಾಖಲೆಗಳಿರಲಿಲ್ಲ. ಗಲ್ಫ್ ದೇಶಗಳಿಂದ ಬಂದಿದ್ದ ಈ ಮಾಲುಗಳನ್ನ ಮುಂಬೈಗೆ ಸಾಗಿಸಲು ಯೋಜಿಸಲಾಗಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗಲ್ಫ್ ದೇಶದಿಂದ ಕೊರಿಯರ್ ಬಂದ ಈ ಸರಕನ್ನು ಹೈದರಾಬಾದ್ ನಲ್ಲಿ ಮುಂಬೈಗೆ ಹೋಗುವ ಸ್ಥಳೀಯ ಕಾರ್ಗೋ ಫ್ಲೈಟ್ ಗೆ ಹಾಕಲಾಗಿತ್ತು. ಸುಂಕದ ಅಧಿಕಾರಿಗಳು ತಪಾಸಣೆ ಮಾಡುವ ವೇಳೆ ಈ ಸರಕು ಸಿಕ್ಕಿದೆ. ಯಾವುದಕ್ಕೂ ದಾಖಲೆಗಳಿಲ್ಲದ್ದರಿಂದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 2 ಕಿಲೋನಷ್ಟು ಚಿನ್ನದ ಬಿಸ್ಕತ್ ಗಳಿದ್ದರೆ, ಉಳಿದ 19 ಕಿಲೋ ಚಿನ್ನ ಹಾಗೂ ವಜ್ರದ ಆಭರಣಗಳಿವೆ ಎಂದು ಅಧಿಕಾರಿಗಳು ಹೇಳಿರುವುದು ತಿಳಿದುಬಂದಿದೆ. ಈ ಚಿನ್ನಗಳನ್ನ ಕೊರಿಯರ್ ಮೂಲಕ ಹೈದರಾಬಾದ್ ಗೆ ಕಳುಹಿಸಿದ ವ್ಯಕ್ತಿ ಯಾರು ಎಂಬುದು ಗೊತ್ತಾಗಿಲ್ಲ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ

ಹೈದರಾಬಾದ್ ಏರ್ ಪೋರ್ಟ್ ನಲ್ಲಿ ಈ ವರ್ಷ ಸಿಕ್ಕಿಬಿದ್ದ ಮೊದಲ ಪ್ರಮುಖ ಕಳ್ಳ ಮಾಲು ಇದಾಗಿದೆ. 2019ರ ಅಕ್ಟೋಬರ್ ತಿಂಗಳಲ್ಲಿ ಇಂಡಿಗೋ ವಿಮಾನದ ಗ್ರಾಹಕ ಸೇವೆ ಸಿಬ್ಬಂದಿ ಸೇರಿದಂತೆ ಮೂವರು ವ್ಯಕ್ತಿಗಳು ಹೈದರಾಬಾದ್ ಗೆ ಚಿನ್ನವನ್ನು ಸ್ಮಗ್ಲಿಂಗ್ ಮಾಡಲು ಯತ್ನಿಸಿದಾಗ ಕಸ್ಟಮ್ಸ್ ಆಫೀಸರ್ ಕೈಗೆ ಸಿಕ್ಕಿಬಿದ್ದಿದ್ದರು. ಹತ್ತಿರಹತ್ತಿರ 2 ಕೋಟಿಯಷ್ಟು ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ದುಬೈನಿಂದ ವಿಮಾನದ ಮೂಲಕ ಬಂದಿದ್ದ ವ್ಯಕ್ತಿಯೊಬ್ಬ ಐರನ್ ಬಾಕ್ಸ್‍ನ ಹೀಟಿಂಗ್ ಕಾಯಿಲ್ ಗಳ ಜಾಗದಲ್ಲಿ ಚಿನ್ನವನ್ನು ಅಡಗಿಸಿಟ್ಟು ಕಳ್ಳಸಾಗಾಣಿಕೆ ಮಾಡಲು ಯತ್ನಿಸಿದ್ದು ಪತ್ತೆಯಾಗಿತ್ತು. ಅಧಿಕಾರಿಗಳು ಸುಮಾರು 9 ಕಿಲೋನಷ್ಟು ಚಿನ್ನವನ್ನು ಸೀಜ್ ಮಾಡಿದ್ದರು.