ಚಿಕ್ಕಮಗಳೂರು : ಆಲ್ದೂರು ಪಟ್ಟಣ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಮನೆಗಳ್ಳತನ, ಚಿನ್ನದಂಗಡಿಗೆ ಕನ್ನ ಹಾಕುತ್ತಿದ್ದ ಕಳ್ಳರು ಇದೀಗ ನೇರವಾಗಿ ತರಕಾರಿ ಅಂಗಡಿಗಳನ್ನೇ ಟಾರ್ಗೆಟ್‌ ಮಾಡಿ, ಟೊಮೆಟೊ ಕಳ್ಳತನ ಮಾಡುತ್ತಿದ್ದಾರೆ. ಇತ್ತೀಚಿಗೆ ಟೊಮೆಟೊ ಕಳ್ಳತನ ಪ್ರಕರಣ ಒಂದಾದ ಮೇಲೊಂದು ದಾಖಲಾಗುತ್ತಿದ್ದು, ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ.

ಅಂಗಡಿಯಲ್ಲಿದ್ದ 3,000 ರೂಪಾಯಿ ಮೌಲ್ಯದ 40 ಕೆ.ಜಿ. ಟೊಮೆಟೊ ಇದ್ದ ಎರಡು ಟ್ರೇಗಳನ್ನು ಕಿಡಿಗೇಡಿಗಳು ಕದ್ದೊಯ್ದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರಿನಲ್ಲಿ ನಡೆದಿದೆ. ಆಲ್ದೂರು ಪಟ್ಟಣದ ನದೀಂ ಎಂಬುವರ ಅಂಗಡಿಯಲ್ಲಿ ಎರಡು ಟ್ರೇ ಟೊಮೆಟೊ ಕಳ್ಳತನವಾಗಿದೆ.

ಆಲ್ದೂರು ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ತರಕಾರಿ ಅಂಗಡಿಯಲ್ಲಿಯೇ ಟೊಮೆಟೊ ಕಳ್ಳತನ ನಡೆದಿದೆ. ಸಾಲ ಮಾಡಿ ತರಕಾರಿ ವ್ಯಾಪಾರ ಮಾಡಿಕೊಂಡು ಬದುಕನ್ನು ಸಾಗಿಸುತ್ತಿದ್ದ ನದೀಂ ಘಟನೆಯ ಬಗ್ಗೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನದೀಂ ಅವರ ತರಾಕಾರಿ ಅಂಗಡಿಗೆ ಬಾಗಿಲು ಇರಲಿಲ್ಲ. ಟಾರ್ಪಲ್ ಕಟ್ಟಿ ಹೋಗುತ್ತಿದ್ದರು. ಈ ಬಗ್ಗೆ ತಿಳಿದಿದ್ದ ಖದೀಮರು ಟೊಮೆಟೊ ಟ್ರೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಘಟನೆಯ ಬಗ್ಗೆ ನದೀಂ ಆಲ್ದೂರು ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.

ಇನ್ನು ಇತ್ತೀಚಿಗಷ್ಟೇ ಹಾಸನದಲ್ಲಿ ಕೂಡ ಇಂತಹ ಘಟನೆ ನಡೆದಿದ್ದು, ಖದೀಮರು ನೇರವಾಗಿ ಟೊಮೊಟೊ ಜಮೀನಿಗೆ ಕನ್ನ ಹಾಕಿದ್ದರು. ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿಯಲ್ಲಿ ಟೊಮೊಟೊ ಕಳ್ಳತನ ನಡೆದಿತ್ತು. ಗೋಣಿ ಸೋಮನಹಳ್ಳಿಯ ಧರಣಿ ಎನ್ನುವ ರೈತನ ಜಮೀನಿಂದ ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಟೊಮೆಟೊವನ್ನು ಕಳ್ಳರು ಕದ್ದೊಯ್ದಿದ್ದರು. ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ಕಳ್ಳರು 50 ರಿಂದ 60 ಚೀಲದಷ್ಟು ಟೊಮೆಟೊ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಘಟನೆಯ ಸಂಬಂಧ ಹಳೇಬೀಡು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.