ಮಂಡ್ಯ: ಎಂತಹ ಕಾಲ ಬಂತು ನೋಡಿ. 9 ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿಯೊಬ್ಬಳು ಮೊಬೈಲ್ ಬಳಸಬೇಡ ಅಂದರೆ ಕೊಲೆ ಮಾಡುವ ರೇಂಜಿಗೆ ಮಕ್ಕಳು ಬದಲಾಗಿದ್ದಾರೆ. ಹೌದು, ಮಂಡ್ಯದಲ್ಲಿ ಇಂತಹ ಘಟನೆ ನಡೆದಿದೆ. ವಿದ್ಯಾನಗರದ ನಿವಾಸಿ 46 ವರ್ಷದ ಶ್ರೀ ಲಕ್ಷ್ಮಿ ತನ್ನ ಮಗನಿಗೆ ಮೊಬೈಲ್ ಬಳಸಬೇಡ ಎಂದು ಬೈದಿರೋದಕ್ಕೆ 12 ವರ್ಷದ ಮಗ ಮನುಶರ್ಮಾ ತಾಯಿಯ ತಲೆಗೆ ಚಕ್ಕುಲಿ ಮಾಡುವ ಹೊಳ್ಳಿನಿಂದ ಜಜ್ಜಿ ಸಾಯಿಸಿ ಬಿಟ್ಟಿದ್ದಾನೆ.
ಹೌದು, ತಲೆಯನ್ನು ಸೀಳಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಡುಗೆ ಮನೆಯಲ್ಲಿ ಕೊಲೆಯಾಗಿದ್ದ ಮಹಿಳೆಯ ದೇಹದಿಂದ ಸುರಿದ ನೆತ್ತರಿಂದ ಇಡೀ ಅಡುಗೆ ಮನೆಯಲ್ಲಿ ರಕ್ತದ ಕೋಡಿ ಹರಿದಿತ್ತು. ಇದನ್ನು ನೋಡಿದರೆ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಅಂದು ಕೊಳ್ಳುವಂತಿತ್ತು. ಮಂಡ್ಯದ ಪಶ್ಚಿಮ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇದರ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮೃತ ಮಹಿಳೆಯ ಗಂಡ ತನ್ನ ಮಗ ಮನುಶರ್ಮಾ ಅಮ್ಮನ ಜೊತೆಗಿದ್ದ ಎಂಬ ಮಾಹಿತಿ ನೀಡಿದ್ದರು. ಘಟನೆ ಬಳಿಕ ಮಗ ನಾಪತ್ತೆಯಾಗಿದ್ದ. ಮಗನ ಮೇಲೆ ಅನುಮಾನಗೊಂಡ ಪೊಲೀಸರು ನಾಪತ್ತೆಯಾದ ಮಗನನ್ನು ಪತ್ತೆಹಚ್ಚಿ, ವಿಚಾರಣೆ ಮಾಡಿದಾಗ ಮನೆಯಲ್ಲಿ ಮೊಬೈಲ್ ಬಳಸದಂತೆ ತಾಯಿ ಹೇಳಿದ್ದಳು. ಅಲ್ಲದೇ ಅವಾಚ್ಯ ಶಬ್ದದಿಂದ ನಿಂದಿಸಿದ್ದಳು. ಇದರಿಂದ ಆಕ್ರೋಶಗೊಂಡು ಚಕ್ಕುಲಿ ಹೊಳ್ಳಿನಿಂದ ತಾಯಿಯ ತಲೆಯನ್ನು ಸೀಳಿ ಹತ್ಯೆ ಮಾಡಿದ್ದಾಗಿ ಪೆÇಲೀಸರ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ. ಆರೋಪಿ ಮಗನ ಹೇಳಿಕೆ ಪಡೆದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಚಕ್ಕುಲಿ ಹೊಳ್ಳು ಸೇರಿದಂತೆ ಮೊಬೈಲ್ ಹಾಗೂ ಬೈಕ್ ಅನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.