ಬೆಂಗಳೂರು: ಡ್ರಗ್ಸ್ ಜಾಲದೊಂದಿಗೆ ನಂಟು ಹೊಂದಿರುವ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿ ಡೋಪಿಂಗ್ ಟೆಸ್ಟ್ ಗೆ ಕಿರಿಕ್ ಮಾಡಿದ್ದಾರೆ.

ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದ ಸಂಜನಾಳನ್ನು ಸಿಸಿಬಿ ಪೊಲೀಸರು ಡೋಪಿಂಗ್ ಟೆಸ್ಟ್ ಗೆಂದು ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆ ತಂದಿದ್ದರು. ಡೋಪಿಂಗ್ ಟೆಸ್ಟ್ ಗೆಂದು ರಕ್ತ, ಮೂತ್ರ ಹಾಗೂ ಕೂದಲಿನ ಮಾದರಿ ತೆಗೆದುಕೊಳ್ಳಲು ವೈದ್ಯರು ಮುಂದಾಗಿದ್ದರು ಈ ವೇಳೆ ವೈದ್ಯರು ಹಾಗೂ ಪೊಲೀಸರ ಜತೆ ಸಂಜನಾ ಕಿರಿಕ್ ಮಾಡಿದ್ದಾರೆ.

ಯಾವುದೇ ಟೆಸ್ಟ್ ಮಾಡಿಸಿಕೊಳ್ಳಲು ಅಥವಾ ನಿರಾಕರಿಸಲು ನನಗೆ ಕಾನೂನಿನ ಪ್ರಕಾರ ಹಕ್ಕಿದೆ. ಹೀಗಾಗಿ ಯಾವುದೇ ಕಾರಣಕ್ಕೂ ರಕ್ತ ಸೇರಿದಂತೆ ಸ್ಯಾಂಪಲ್ ಕೊಡಲು ಆಗಲ್ಲ. ನೀವು ಒತ್ತಾಯ ಮಾಡಲು ಹಕ್ಕಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ.

ಆದರೆ, ನ್ಯಾಯಾಲಯದಿಂದ ಅನುಮತಿ ಪಡೆದಿರುವುದಾಗಿ ಸಿಸಿಬಿ ಪೊಲೀಸರು ಹೇಳಿದ್ರೂ ಮೊಂಡಾಟ ಬಿಡಲಿಲ್ಲ. ನಮ್ಮ ವಕೀಲರು ಹೇಳಿದ್ರೆ ಮಾತ್ರ ಒಪ್ಪಿಕೊಳ್ತೇನೆ ಎಂದು ಹಠ ಹಿಡಿದಿದ್ದಾಳೆ. ಪೊಲೀಸರು ಸಂಜನಾ ಪರ ವಕೀಲರಿಗೆ ಫೋನ್ ಮಾಡಿದ್ದಾರೆ. ಕೋರ್ಟ್ ಆದೇಶ ಇದೆ, ಮೆಡಿಕಲ್ ಟೆಸ್ಟ್ ಗೆ ನಿರಾಕರಿಸುವುದು ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ವಕೀಲರು ಸಲಹೆ ನೀಡಿದ ಬಳಿಕ ಸಂಜನಾ ಒಪ್ಪಿಕೊಂಡಿದ್ದಾಳೆ.

ಸಂಜನಾ ಡೋಪಿಂಗ್ ಟೆಸ್ಟ್ ಗೆ ನಿರಾಕರಿಸುವುದಕ್ಕೂ ಕಾರಣ ಇದೆ. ಒಂದು ವೇಳೆ ಡೋಪಿಂಗ್ ಟೆಸ್ಟ್ ನಲ್ಲಿ ಡ್ರಗ್ಸ್ ಅಂಶ ಪತ್ತೆಯಾದರೆ ಕಂಟಕವಾಗುತ್ತದೆ ಎಂಬ ಕಾರಣಕ್ಕೆ ಹಿಂದೇಟು ಹಾಕಿದ್ದಾಳೆ. ಅರೆಸ್ಟ್ ಆಗುವುದಕ್ಕೂ ಮೊದಲು ವಕೀಲರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರಿಂದ ಈ ವಿಚಾರವಾಗಿ ಸಂಜನಾ ಸಮಾಲೋಚನೆ ನಡೆಸಿದ್ದಳಂತೆ. ಒಂದು ವೇಳೆ ಪೊಲೀಸರು ಬಂಧಿಸಿದರೆ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಳು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಡೋಪಿಂಗ್ ಟೆಸ್ಟ್ ಗೆ ಒಲ್ಲೆ ಎಂದಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಡ್ರಗ್ಸ್ ಕೇಸಲ್ಲಿ ಅರೆಸ್ಟ್ ಆಗಿರುವ ಎಲ್ಲಾ 8 ಆರೋಪಿಗಳಿಗೂ ಡೋಪಿಂಗ್ ಟೆಸ್ಟ್ ಮಾಡಿಸಲಾಗಿದೆ. ಎಲ್ಲರ ರಕ್ತ, ಮೂತ್ರ ಹಾಗೂ ಕೂದಲಿನ ಮಾದರಿಯ ಸ್ಯಾಂಪಲ್ ಪಡೆಯಲಾಗಿದೆ.