ಮಾದಕ ವಸ್ತು ಮಾರಾಟ ಜಾಲದ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ವಿಚಾರಣೆ ವೇಳೆ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ರಾಜಕೀಯ ಗಣ್ಯರ ಪುತ್ರರು, ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ 30 ಮಂದಿ ಪ್ರಮುಖರ ಹೆಸರನ್ನು ಬಹಿರಂಗಪಡಿಸಿದ್ದಾರೆಂದು ತಿಳಿದುಬಂದಿದೆ.

ಈ ಇಬ್ಬರೂ ನಟಿಯರು ದಂಧೆಯಲ್ಲಿ ಭಾಗಿಯಾಗಿರುವ 30 ಮಂದಿಯ ಹೆಸರನ್ನು ನೀಡಿದ್ದು, ಎರಡೂ ಪಟ್ಟಿಯಲ್ಲಿರುವ ಹೆಸರುಗಳು ಒಂದೇ ರೀತಿಯಲ್ಲಿವೆ. ಇದರಲ್ಲಿ ಪ್ರಮುಖ ರಾಜಕೀಯ ಗಣ್ಯರ ಪುತ್ರರು, ಸಂಸದರು, ಶಾಸಕರ ಹೆಸರುಗಳಿವೆ ಎನ್ನಲಾಗುತ್ತಿದೆ. ಆದರೆ, ಈ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ಮಾಡಲು ಅಧಿಕಾರಿಗಳ ಬಳಿ ಸೂಕ್ತ ಸಾಕ್ಷ್ಯಾಧಾರಗಳು ಅಧಿಕಾರಿಗಳಿಗೆ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ.

ತನಿಖಾಧಿಕಾರಿಗಳು ಬಂಧನದಲ್ಲಿರುವ ಆರೋಪಿಗಳ ಮೊಬೈಲ್, ವಾಟ್ಸ್‍ಪ್ , ಸೇರಿದಂತೆ ಅವರಿಗೆ ಬಂದಿರುವ ಕರೆಗಳ ವಿವರಗಳನ್ನು ಜಾಲಾಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಸುಮಾರು 100 ಕ್ಕೂ ಹೆಚ್ಚು ಗಣ್ಯವ್ಯಕ್ತಿಗಳ ಜೊತೆ ಇವರು ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಹೀಗಾಗಿ ಜಾಲದ ಆಳವನ್ನು ಇನ್ನಷ್ಟು ಕೆದಕಿ ಕೆಲವರನ್ನು ವಿಚಾರಣೆಗೆಗೊಳಪಡಿಸಲು ಮುಂದಾಗಿದ್ದಾರೆ.

ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಹಾಗೂ ಇತರ ಆರೋಪಿಗಳ ಮೊಬೈಲ್ ಗಳಿಂದ ಕೆಲವು ಪ್ರಮುಖ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿವೆ ಎನ್ನಲಾಗಿದೆ.ನಟಿಯರ ಮೊಬೈಲ್ ಗಳಲ್ಲಿ ಮೈ ಮಾರಾಟ ದಂಧೆ, ಚಾಟ್ ನಡೆಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗತೊಡಗಿದೆ ಎನ್ನಲಾಗುತ್ತಿದೆ.