ಮಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪೆಡ್ಲರ್‍ ಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನಿರೂಪಕಿ ಅನುಶ್ರೀಗೆ ಸಿಸಿಬಿಯಿಂದ ನೋಟಿಸ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ನಿರೂಪಕಿ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳೂರಿನ ಸಿಸಿಬಿ ಪೊಲೀಸರು ಬೆಂಗಳೂರಿಗೆ ತೆರಳಿ ನೋಟಿಸ್ ನೀಡಿದ್ದರು. ಇವರಿಗೆ ತಾನು ಶುಕ್ರವಾರವೇ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದರು. ಆದರೆ ನಿನ್ನೆ ಅನುಶ್ರಿ ವಿಚಾರಣೆಗೆ ಹಾಜರಾಗಿರಲಿಲ್ಲ. ಇಂದು ಮಂಗಳೂರಿನ ಪಣಂಬೂರು ಠಾಣೆಯಲ್ಲಿ ನಿರೂಪಕಿ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದಾರೆ.

ಇಂದು ಸಿಸಿಬಿ ಪೊಲೀಸರು ಹಾಗೂ ನಾರ್ಕೋಟಿಕ್ ಪೊಲೀಸರಿಂದ ಅನುಶ್ರೀಯ ವಿಚಾರಣೆ ಆರಂಭಗೊಂಡಿದೆ. ಈಗಾಗಲೇ ಬಂಧನವಾಗಿರುವ ಕಿಶೋರ್, ತರುಣ್, ನೌಶೀನ್ ಮಂಗಳೂರಿನ ಪಾಂಡೇಶ್ವರದಲ್ಲಿನ ಇಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇವರಿಂದ ಸಾಕಷ್ಟು ಮಾಹಿತಿ ಸಂಗ್ರಹಿಸಿದ ಪೊಲೀಸರು ಶುಕ್ರವಾರ ಸಂಜೆ ವೇಳೆಗೆ ಕಿಶೋರ್ ಹಾಗೂ ನೌಶೀನ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕೋರ್ಟಿಗೆ ಹಾಜರುಪಡಿಸುವ ಮುನ್ನ ಆರೋಪಿಗಳಿಗೆ ಡ್ರಿಲ್ ಮಾಡಲಾಗಿದ್ದು, ಆರೋಪಿ ತರುಣ್ ಅನುಶ್ರೀ ಬಗೆಗಿನ ಮಹತ್ವದ ಸಂಗತಿಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಈ ಎಲ್ಲಾ ಮಾಹಿತಿಗಳು ಅನುರ್ಶರೀಗೆ ಕಂಟಕವಾಗುವ ಸಾಧ್ಯತೆ ಇದೆ.