ಬೆಂಗಳೂರು: ಸತತ ಮೂರು ವರ್ಷಗಳಿಂದ ಪೊಲೀಸರರಿಗೆ ಚಲ್ಲೆ ಹಣ್ಣು ತಿನ್ನಿಸುತ್ತಲೇ ಬಂದಿದ್ದ ಕುಖ್ಯಾತ ರೌಡಿ ಅನೀಸ್ ಕೊನೆಗೂ ಪೊಲೀಸರ ಬಂಧಿಯಾಗಿದ್ದಾನೆ. ಕೊಲೆ ಸೇರಿದಂತೆ ಹಲವಾರು ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಅನೀಸ್ ಅಹಮ್ಮದ್ ನನ್ನು ಇಂದು ನಸುಕಿನಲ್ಲಿ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೆ.ಜಿ ಹಳ್ಳಿ ಅರೆಬಿಕಾ ಕಾಲೇಜು ಬಳಿ ಕೊಲೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅನೀಸ್‍ನನ್ನು ಬಂಧಿಸಲು ಪೊಲೀಸರು ಬರುತ್ತಿದ್ದಂತೆಯೇ ಇದನ್ನು ಅರಿತ ಅನೀಸ್ ಪೆÇಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ. ಆ ನಂತರ ಅಲ್ಲಿಂದ ಪರಾರಿಯಾಗಲು ಅನೀಸ್ ಪ್ರಯತ್ನಿಸುತ್ತಿದ್ದಂತೆಯೇ ಕೆ.ಜಿ ಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಅಜಯ್ ಸಾರಥಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ಒಂದು ಕೊಲೆ ಮಾಡಿರುವ ಗಂಭೀರ ಆರೋಪ ಅನೀಸ್ ಮೇಲಿದ್ದು, ಪೊಲೀಸರ ಕೈಗೆ ಮಾತ್ರ ಆತ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ತಮ್ಮ ಮೇಲೆ ಹಲ್ಲೆ ಮಾಡಿದ್ದ ಅನೀಸ್ ಓಡಿಹೋಗಲು ಪ್ರಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಅವನ ಮೇಲೆ ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು. ನಿಯಮದ ಪ್ರಕಾರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.