ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ಆರೋಪದಡಿ ಇಂದು ಸಿಸಿಬಿ ನೋಟಿಸ್ ಮೇರೆಗೆ ಐಂದ್ರಿತಾ ಹಾಗೂ ದಿಗಂತ್ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಗೆ ಹಾಜರಾಗಿದ್ದ ಸ್ಟಾರ್ ದಂಪತಿಗೆ ಸದ್ಯ ಮೊದಲ ದಿನ ರಿಲೀಫ್ ಸಿಕ್ಕಿದೆ. ಈ ಜೋಡಿ ವಿಚಾರಣೆಗೆ ಸಂಪೂರ್ಣವಾಗಿ ಸಹಕರಿಸಿದ್ದು, ಮನೆಗೆ ಕಳುಹಿಸಿಕೊಟ್ಟಿದ್ದಾರೆ. ವಿಚಾರಣೆ ಮುಗಿಸಿ ಹೊರಬಂದ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿ ತನಿಖೆ ನಡೆಯುತ್ತಿದೆ, ನಾವು ಸಂಪೂರ್ಣವಾಗಿ ಸಹಕಾರ ನೀಡುತ್ತೇವೆ. ಮತ್ತೊಮ್ಮೆ ವಿಚಾರಣೆಗೆ ಕರೆದರೆ ನಾವು ಹಾಜರಾಗುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನೂ ದಿಗಂತ್ ಮತ್ತು ಐಂದ್ರಿತಾ ರೇ ಅವರ ವಿಚಾರಣೆಗೆ ಸಂಬಂಧಿಸಿದಂತೆ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಪ್ರತಿಕ್ರಿಯಿಸಿದ್ದು, ದಿಗಂತ್ ಮತ್ತು ಐಂದ್ರಿತಾ ರೇ ಅವರ ಮೊದಲ ಹಂತದ ವಿಚಾರಣೆ ನಡೆದಿದೆ. ಈ ಹಂತದಲ್ಲಿ ಮಾಹಿತಿ ಪಡೆದಿದ್ದೇವೆ. ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಿದ್ದೇವೆ ಎಂದು ತಿಳಿಸಿದ್ದಾರೆ.

 ಡ್ರಗ್ಸ್ ದಂಧೆಯಲ್ಲಿ ಸಿಲುಕಿಕೊಂಡಿರುವ ಸ್ಯಾಂಡಲ್ ವುಡ್ ಬೆಡಗಿ ಸಂಜನಾಗೆ ಜೈಲು ಸೇರಿದ್ದಾರೆ. ಸಿಸಿಬಿ ಕಸ್ಟಡಿಯಲ್ಲಿದ್ದ ಸಂಜನಾ ಅವರನ್ನು ಇಂದು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ತೀವ್ರ ವಿಚಾರಣೆಯ ನಂತರ ಅವರನ್ನು 2 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಈಗಾಗಲೇ ಪರಪ್ಪನ ಅಗ್ರಹಾರದ ವಿಶೇಷ ಸೆಲ್ ನಲ್ಲಿರುವ ಮತ್ತೊಬ್ಬ ನಟಿ ರಾಗಿಣಿ ಅವರ ಜೊತೆ ಈಗ ಸಂಜನಾ ಸೇರಿಕೊಳ್ಳಲಿದ್ದಾರೆ. ಸಂಜನಾ ಅವರ ಪೊಲೀಸ್ ಕಸ್ಟಡಿ ಇಂದು ಮುಗಿಯುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆಯಿಂದ ಸಿಸಿಬಿ ಪೊಲೀಸರು ಸಂಜನಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.