ಲಖಿಂಪುರ ಖೇರಿ: ಕಾಮುಕರ ಅಟ್ಟಹಾಸ ಹೆಚ್ಚಾಗುತ್ತಿದೆ. ಪುಟ್ಟ ಪುಟ್ಟ ಕಂದಮ್ಮಗಳ ಮೇಲೆ ರಾಕ್ಷಸತನ ಮೆರೆಯುತ್ತಿದ್ದಾರೆ. ಹೌದು ಉತ್ತರ ಪ್ರದೇಶದ ಲಖನೌನಲ್ಲಿ ಕಳೆದ 20 ದಿನಗಳಲ್ಲಿ ಮೂವರು ಬಾಲಕಿಯರ ಅತ್ಯಾಚಾರ ಹಾಗೂ ಕೊಲೆ ನಡೆದಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ..
ಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಲಕ್ಷ್ಮೀಪುರಖೇರಿಯಲ್ಲಿ ನಡೆದಿದೆ. ಮೂರು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ಇದು ಸೇರಿ 20 ದಿನಗಳೊಳಗೆ ಈ ಜಿಲ್ಲೆಯಲ್ಲಿ ನಡೆದ ಮೂರನೇ ಘಟನೆಯಾಗಿದೆ. ಈ ಬಾಲಕಿ ಕಳೆದ ಬುಧವಾರದಿಂದ ನಾಪತ್ತೆಯಾಗಿದ್ದಳು, ಕುಟುಂಬದವರು ಹಾಗೂ ಊರಿನವರು ಸೇರಿ ಹುಡುಕಾಟ ನಡೆಸಿದ್ದಾರೆ.
ಆದರೆ ಈ ಪುಟ್ಟ ಬಾಲಕಿ ಮೃತ ದೇಹ ಅತ್ಯಚಾರವೆಸಗಿರುವ ಸ್ಥಿತಿಯಲ್ಲಿ ಗದ್ದೆಯಲ್ಲಿ ಪತ್ತೆಯಾಗಿದೆ. ಇನ್ನು ಬಾಲಕಿಯ ಮರಣೋತ್ತರ ವರದಿ ಬಂದಿದ್ದು ಅತ್ಯಚಾರವೆಸಗಿ ಕೊಲೆ ಮಾಡಿರುವುದು ತಿಳಿದುಬಂದಿದೆ. ಶಂಕಿತನ ವಿರುದ್ಧ ಬಾಲಕಿಯ ತಂದೆ ದೂರು ದಾಖಲು ಮಾಡಿದ್ದಾರೆ. ತಮ್ಮ ಕುಟುಂಬದ ಮೇಲಿನ ಸಿಟ್ಟಿನಿಂದ ನನ್ನ ಮಗಳನ್ನು ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ. ಬಾಲಕಿಯ ತಂದೆಯ ಹೇಳಿಕೆಯಂತೆ ಇದೀಗ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇನ್ನು ಇತ್ತೀಚೆಗೆ ಸ್ಕಾಲರ್ಶಿಪ್ ಅರ್ಜಿ ಭರ್ತಿ ಮಾಡಲೆಂದು ಮನೆಯಿಂದ ಶಾಲೆಗೆ ತೆರಳಿದ್ದ 17 ವರ್ಷದ ಯುವತಿ ನಾಪತ್ತೆಯಾಗಿದ್ದಳು. ಬಳಿಕ ಪಾಳು ಕೆರೆಯಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆಗಸ್ಟ್ 15 ರಂದು ಇನ್ನೋರ್ವ ಬಾಲಕಿಯೊಬ್ಬಳನ್ನು ಅಪಹರಿಸಲಾಗಿತ್ತು, ಬಳಿಕ ಕಬ್ಬಿನ ಗದ್ದೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಆಕೆಯ ಕಣ್ಣುಗಳನ್ನು ಕಿತ್ತಿದ್ದರು, ನಾಲಿಗೆಯನ್ನು ಕತ್ತರಿಸಲಾಗಿತ್ತು. ಇದು ಸೇರಿ ಒಂದು ತಿಂಗಳ ಅಂತರಲ್ಲಿ ಒಟ್ಟು ಮೂರು ಘಟನೆಗಳು ನಡೆದಂತಾಗಿದೆ.