ಹೊಸದಿಲ್ಲಿ : ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ನಡೆದ ಕೋಲ್ಕತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಭದ್ರತೆಯನ್ನು ಒದಗಿಸುವ ಹೊಣೆಯನ್ನು ಹೊತ್ತಿರುವ ಸಿಐಎಸ್‌ಎಫ್‌ಗೆ ಲಾಜಿಸ್ಟಿಕ್ಸ್ ಬೆಂಬಲವನ್ನು ಒದಗಿಸುವಲ್ಲಿ ಪಶ್ಚಿಮ ಬಂಗಾಳದ ‘ಅಕ್ಷಮ್ಯ’ ಅಸಹಕಾರವನ್ನು ಆರೋಪಿಸಿ ಕೇಂದ್ರವು ಮಂಗಳವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.
ಟಿಎಂಸಿ ಸರಕಾರದ ಅಸಹಕಾರದ ವಿರುದ್ಧ ಕಿಡಿಕಾರಿರುವ ಗೃಹ ವ್ಯವಹಾರಗಳ ಸಚಿವಾಲಯವು, ಸಿಐಎಸ್‌ಎಫ್ ಜೊತೆ ಸಂಪೂರ್ಣವಾಗಿ ಸಹಕರಿಸುವಂತೆ ಪಶ್ಚಿಮ ಬಂಗಾಳ ಅಧಿಕಾರಿಗಳಿಗೆ ನಿರ್ದೇಶನವನ್ನು ಕೋರಿದೆ. ಸಹಕರಿಸಲು ವಿಫಲಗೊಂಡರೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಆರಂಭಿಸುವಂತೆ ಅದು ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದೆ.
ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ‘ಭಯಾನಕ’ ಎಂದು ಆ.20ರಂದು ಬಣ್ಣಿಸಿದ್ದ ಸರ್ವೋಚ್ಚ ನ್ಯಾಯಾಲಯವು, ವೈದ್ಯರು ಮತ್ತು ಇತರ ಆರೋಗ್ಯ ರಕ್ಷಣೆ ವೃತ್ತಿಪರರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಶಿಷ್ಟಾಚಾರವನ್ನು ರೂಪಿಸಲು 10 ಸದಸ್ಯರ ರಾಷ್ಟ್ರೀಯ ಕಾರ್ಯ ಪಡೆಯ ರಚನೆ ಸೇರಿದಂತೆ ಹಲವಾರು ನಿರ್ದೇಶನಗಳನ್ನು ಹೊರಡಿಸಿತ್ತು.ಅಲ್ಲದೆ,ಆಸ್ಪತ್ರೆಯಲ್ಲಿ ಗುಂಪು ಹಿಂಸಾಚಾರ ಮತ್ತು ಕೋಲ್ಕತಾ ಪೋಲಿಸರು ಸ್ಥಳದಿಂದ ಪರಾರಿಯಾಗಿದ್ದರು ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯವು ಮುಷ್ಕರನಿರತ ವೈದ್ಯರು ಕರ್ತವ್ಯಕ್ಕೆ ಮರಳುವಂತಾಗಲು ಸಿಐಎಸ್‌ಎಫ್ ಸಿಬ್ಬಂದಿಗಳ ನಿಯೋಜನೆಗೆ ಆದೇಶಿಸಿತ್ತು.