ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ, ರಾಗಿಣಿ, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ.

1 ನೇ ಎಸಿಎಂಎಂ ನ್ಯಾಯಧೀಶರು ಪೊಲೀಸ್ ಕಸ್ಟಡಿಗೆ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿಯ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಿದೆ. ಹೀಗಾಗಿ, ಇಂದು ರಾಗಿಣಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಇವರ ಜೊತೆಗೆ ನಟಿ ಸಂಜನಾ, ರಾಹುಲ್, ಲೂಮ್, ಪ್ರಶಾಂತ್ ರಂಕಾ , ರವಿ ಶಂಕರ್, ನಿಯಾಜ್ ಆರು ಮಂದಿಯನ್ನು ನ್ಯಾಯಾದೀಶರು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.

ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರು ಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ನಟಿಯನ್ನು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪ್ರಕರಣದಲ್ಲಿ ಇದುವರೆಗೂ ಆಗಿರುವ ತನಿಖೆಯ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರು.

ಆರೋಪಿ ರವಿ ಶಂಕರ್ ನೀಡಿರುವ ಮಾಹಿತಿ ಮೇರೆಗೆ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಆರೋಪಿ ನೀಡಿರುವ ಹೇಳಿಕೆಗಳಿಗೆ ನಟಿ ರಾಗಿಣಿ, ಸಂಜನಾ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ವಿಚಾರಣೆಗೂ ಸಹಕಾರ ನೀಡುತ್ತಿಲ್ಲ. ಉದ್ದೇಶ ಪೂರ್ವಕವಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆ. ಅಲ್ಲದೇ ನ್ಯಾಯಾಂಗ ಬಂಧನಕ್ಕೆ ನೀಡಿದರೇ ಈಗಾಗಲೇ ನಡೆದಿರುವ ತನಿಖಾ ಅಂಶಗಳು ಲೀಕ್ ಹಾಗುವ ಸಾಧ್ಯತೆ ಇದೆ. ಈಗಾಗಲೇ ರಕ್ತ ಮಾದರಿ ಪರೀಕ್ಷೆಗೆ ನೀಡಲಾಗಿದ್ದು, ಆದರೆ ಆ ವರದಿ ಇನ್ನೂ ಬಂದಿಲ್ಲ ಎಂದು ಸಿಸಿಬಿ ಪೊಲೀಸರು ತಮ್ಮ ಮಾಹಿತಿಯನ್ನು ನೀಡಿದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ಕೋರ್ಟ್ 3 ದಿನಗಳವರೆಗೆ ಕಸ್ಟಡಿಗೆ ನೀಡಿದೆ.