ದೆಹಲಿ :ಪ್ರಧಾನಿ ನರೇಂದ್ರ ಮೋದಿ 70ನೇ ಹುಟ್ಟುಹಬ್ಬವನ್ನು ದೇಶಾದ್ಯಂತ ಸಂಭ್ರಮದಿಂದ ಹಲವು ವಿಶೇಷ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತಿದೆ. ಅವರ ಅಭಿಮಾನಿಗಳು ಹಾಗೂ ಬಿಜೆಪಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಹಲವು ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ನಿತ್ಯವೂ ಒಂದಿಲ್ಲೊಂದು ಟೀಕೆಗಳನ್ನು ಟ್ವೀಟ್ ಮೂಲಕ ಮಾಡುತ್ತ ಬಂದಿರುವ ಕಾಂಗ್ರೆಸ್ ಕಣ್ಮಣಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಿಗೆ ಗುರುವಾರ ಬೆಳಗ್ಗೆ 7.11ಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಹ್ಯಾಪಿ ಬರ್ತ್​ ಡೇ ಎಂದು ವಿಶ್ ಮಾಡಿದ್ದಾರೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಅಮಿತ್ ಅವರು ಭಾವನಾತ್ಮಕ ಸಾಲುಗಳನ್ನು ಬರೆದಿದ್ದು, ಸದೃಡ, ಸುರಕ್ಷಿತ ಹಾಗೂ ಸ್ವಾವಲಂಬಿ ಭಾರತದವನ್ನು ನಿರ್ಮಿಸಲು ಪ್ರಧಾನಿ ನರೇಂದ್ರ ಮೋದಿ ತಮ್ಮ ಜೀವನದ ಪ್ರತಿ ಕ್ಷಣವನ್ನೂ ಮೀಸಲಿರಿಸಿದ್ದಾರೆ. ಅವರ ನಾಯಕತ್ವದಲ್ಲಿ ರಾಷ್ಟ್ರ ಸೇವೆ ಮಾಡುತ್ತಿರುವ ನಾನೇ ಅದೃಷ್ಟಶಾಲಿ. ಎಲ್ಲ ದೇಶವಾಸಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆರೋಗ್ಯ ದೀರ್ಘಾಯುಷ್ಯವನ್ನು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಶುಭಾಶಯ ತಿಳಿಸಿದ್ದು, ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಅಭಿಮಾನಪೂರ್ವಕ ಶುಭಕಾಮನೆಗಳು. ಆರೋಗ್ಯಪೂರ್ಣವಾಗಿ ಇನ್ನೂ ಬಹಳ ವರ್ಷಗಳ ಕಾಲ ತಮ್ಮ ರಾಷ್ಟ್ರ ಸೇವೆ ಹೀಗೆಯೇ ಮುಂದುವರಿಯುವಂತೆ ದೇವರು ಆಶೀರ್ವದಿಸಲಿ ಎಂದು ಹಾರೈಸಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 70ನೇ ಹುಟ್ಟುಹಬ್ಬ ದ ಈ ವಿಶೇಷ ಸಂದರ್ಭವನ್ನು ಬಿಜೆಪಿ ವಿಶೇಷ ರೀತಿಯಲ್ಲಿ ಆಚರಿಸುತ್ತಿದೆ. ಮೋದಿ 70ನೇ ಹುಟ್ಟುಹಬ್ಬ ವನ್ನು ಬಿಜೆಪಿ ‘ಸೇವಾ ವಾರ’ ಎಂದು ಆಚರಿಸುತ್ತಿದೆ. ಸೆಪ್ಟೆಂಬರ್ 14 ರಿಂದ 20 ರವರೆಗೆ ನಡೆಯುವ ಈ ಸೇವಾ ಸಪ್ತಾಹದಲ್ಲಿ ಬೂತ್ ಹಂತದವರೆಗಿನ ಪ್ರತಿಯೊಬ್ಬ ಕಾರ್ಮಿಕರು ತಮ್ಮ ಪ್ರದೇಶಗಳಲ್ಲಿ ವಿಭಿನ್ನ ಸೇವೆಯನ್ನು ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹಣ್ಣುಗಳನ್ನು ವಿತರಿಸುವುದು, ಮಕ್ಕಳಿಗೆ ಪುಸ್ತಕಗಳನ್ನು ನೀಡುವುದು, ರಕ್ತದಾನ ಅಥವಾ ಹಲವು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡಲಿದ್ದಾರೆ.