ಬೆಳಗಾವಿ: ತನ್ನ ಮಡದಿಯನ್ನು ಮಂತ್ರವಾದಿಯೊಬ್ಬ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಆರೋಪಿಸಿ ಗೀತ ರಚನೆಕಾರ, ಸಾಹಿತಿ ಕೆ. ಕಲ್ಯಾಣ್ ಪೊಲೀಸ್ ದೂರು ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ ಗ್ರಾಮದ ಶಿವಾನಂದ ವಾಲಿ ಎಂಬ ಮಂತ್ರವಾದಿಯು ನನ್ನ ಪತ್ನಿ, ಅತ್ತೆ ಮತ್ತು ಮಾವನನ್ನು ವಶದಲ್ಲಿಟ್ಟುಕೊಂಡು ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ. ಲಕ್ಷಾಂತರ ರೂ. ನಗದು ದೋಚಿದ್ದಾನೆ ಎಂದು ಸೆ. 30ರಂದು ಕಲ್ಯಾಣ್ ಅವರು  ಬೆಳಗಾವಿಯ ಮಾಳಮಾರುತಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಲ್ಯಾಣ್ ಅವರ ದೂರಿನ ಮೇರೆಗೆ, ಪೊಲೀಸರು  ಮಂತ್ರವಾದಿ ಶಿವಾನಂದ ವಾಲಿಯನ್ನು ಶನಿವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಲ್ಯಾಣ್ ಪತ್ನಿ ಅಶ್ವಿನಿ ಅವರನ್ನೂ ಠಾಣೆಗೆ ಕರೆತಂದು ಮಾಹಿತಿ ಪಡೆದಿದ್ದಾರೆ. ‘ನಮ್ಮನ್ನು ಯಾರೂ ಅಪಹರಣ ಮಾಡಿಲ್ಲ. ದಾಂಪತ್ಯ ಕಲಹ ಹಿನ್ನೆಲೆಯಲ್ಲಿ ಜೂನ್ 26ರಂದು ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಹೀಗಾಗಿ ಕಲ್ಯಾಣ್ ದಾರಿ ತಪ್ಪಿಸಲು ಸುಳ್ಳು ದೂರು ನೀಡಿದ್ದಾರೆ’ ಎಂದು ಅಶ್ವಿನಿ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಜೂನ್ 26ರಂದು ಮಾಳ ಮಾರುತಿ ಠಾಣೆಗೆ ಅಶ್ವಿನಿ ಅವರು ದೂರು ಕೂಡ ನೀಡಿದ್ದರು. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸದೆ, ಕಲ್ಯಾಣ್ ಕೊಟ್ಟಿರುವ ಸುಳ್ಳು ದೂರು ಸ್ವೀಕರಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಸತೀಶ್ ದಳವಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಸ್ತಿಗಾಗಿಯೇ ಕಲ್ಯಾಣ್ ಮದುವೆಯಾಗಿದ್ದಾರೆ. ಇದೀಗ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ತಮ್ಮ ಕಕ್ಷಿದಾರರು 14 ವರ್ಷಗಳ ದಾಂಪತ್ಯ ಜೀವನ ಕೊನೆಗೊಳಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ ಎಂದು ದಳವಾಯಿ ಹೇಳಿದ್ದಾರೆ.