ಬೆಂಗಳೂರು : ಹಾವಿನ ದ್ವೇಷ 12 ವರ್ಷ ಅಂತಾರೆ, ಅದೇ ರೀತಿ ಇದೀಗ ಮಾನವರೂ ಅದೇ ಹಗೆ ಸಾಧಿಸ್ತಿದ್ದಾರೆ. 2016 ರಲ್ಲಿ ನಡೆದ ಕೊಲೆ , 2017ರಲ್ಲಿ ಅದರ ಪ್ರತೀಕಾರ, 2020 ರಲ್ಲಿ ಸುಪಾರಿ ಸ್ಕೆಚ್. ಹೀಗೆ ಎರಡು ಕುಟುಂಬಗಳ ನಡುವಿನ ದ್ವೇಷ ನಾಲ್ಕು ವರ್ಷ ಕಳೆದರೂ ತಣ್ಣಗಾಗದೇ ಸೇಡಿನ ಬೆಂಕಿಯಲ್ಲೇ ಬೇಯುತ್ತಿದೆ.
2016 ರ ನವೆಂಬರ್ ನಂದು ಕಾಮಾಕ್ಷಿಪಾಳ್ಯ ಸ್ಟೇಷನ್ ವ್ಯಾಪ್ತಿಯಲ್ಲಿ ರಾಜಕೀಯ ದ್ವೇಷಕ್ಕೆ ಬಿಜೆಪಿ ಮುಖಂಡ ಚಿಕ್ಕತಿಮ್ಮೇಗೌಡನ ಕೊಲೆಯಾಗಿತ್ತು. ಕೊಲೆಗೆ ಸುಪಾರಿ ನೀಡಿದ ಆರೋಪದಡಿ ಎ1 ವರಮಹಾಲಕ್ಷ್ಮಿ ಆಕೆಯ ಪತಿ ಎ2 ಗೋವಿಂದೇಗೌಡ ಜೈಲು ಪಾಲಾಗಿದ್ದರು. ಚಿಕ್ಕತಿಮ್ಮೇಗೌಡನ ಕೊಲೆ ಕೇಸ್‍ನಲ್ಲಿ ಜೈಲಿಗೆ ಹೋಗಿ ಬಂದ ಗಂಡ- ಹೆಂಡತಿ 5 ತಿಂಗಳ ಬಳಿಕ ಜಾಮೀನಿನ ಮೇಲೆ ಹೊರಗಡೆ ಬಂದಿದ್ದರು. ಗೋವಿಂದೇಗೌಡ ಹೊರಗಡೆ ಬಂದಿದ್ದೇ ತಡ 2017 ರ ಡಿಸೆಂಬರ್‍ನಲ್ಲಿ ಹೆಗ್ಗನಹಳ್ಳಿಯಲ್ಲಿ ಕೊಲೆಯಾಗಿದ್ದ.
ಗಂಡನ ಹತ್ಯೆ ಕಂಡ ವರಮಹಾಲಕ್ಷ್ಮಿ , ಚಿಕ್ಕತಿಮ್ಮೇಗೌಡನ ಫ್ಯಾಮಿಲಿಯನ್ನ ಮುಗಿಸಲೇಬೇಕು ಅಂತ ಪಣ ತೊಟ್ಟಿದ್ದಳು. ಹೀಗಾಗಿ ರೌಡಿ ಲಕ್ಷ್ಮಣ ಕೊಲೆ ಕೇಸ್ ಸೇರಿದಂತೆ 25 ಕ್ಕೂ ಹೆಚ್ಚು ಪ್ರಕರಣದಲ್ಲಿ ಬೆಳಗಾವಿಯ ಹಿಂಡಗಲಾ ಜೈಲಿನಲ್ಲಿರುವ ಆರೋಪಿ ಕ್ಯಾಟ್‍ರಾಜ , ಮತ್ತೊಬ್ಬ ಬಳ್ಳಾರಿ ಜೈಲಿನಲ್ಲಿರುವ ಆರೋಪಿ ಹೇಮಂತ್ ಅಲಿಯಾಸ್ ಹೇಮಿಗೆ ಈ ಹಿಂದೆ ಹತ್ಯೆ ಗೈದ ಚಿಕ್ಕತಿಮ್ಮೇಗೌಡನ ತಮ್ಮಂದಿರಾದ ನಟರಾಜ್ , ಹೇಮಂತ್‍ನನ್ನ ಮುಗಿಸಲು ವರಮಹಾಲಕ್ಷ್ಮಿ ಇವರಿಬ್ಬರಿಗೂ 70 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದು, ಈಗಾಗ್ಲೇ 4-5 ಲಕ್ಷವನ್ನ ಅವರ ಕೈಸೇರಿಸಿದ್ದಳು ಎನ್ನಲಾಗಿದೆ.
ಜೈಲಿನಲ್ಲೇ ಕುಳಿತು ಸ್ಕೆಚ್ ಹಾಕಿದ ಕ್ಯಾಟ್ ರಾಜ ಮತ್ತು ಹೇಮಿ, ಆತನ ಸಹೋದರ ಚೇತನ್ ಮತ್ತು ಅವನ ಸಹಚರರಿಗೆ ಡೀಲ್ ಕೊಟ್ಟರು. ಡೀಲ್ ತಗೊಂಡ ಅವರು, ಕಳೆದ ವಾರ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ಕೊಲೆಗೆ ಹೊಂಚು ಹಾಕುತಿದ್ದಾಗ ಈ ಮಾಹಿತಿ ತಿಳಿದ ಪೊಲೀಸರು ಬಲೆ ಬೀಸಿದ್ದರು. ಇದೀಗ ಡೀಲ್ ಪಡೆದ ರೌಡಿ ಹೇಮಿ ಸಹೋದರ ಚೇತು ಸೇರಿದಂತೆ 9 ಮಂದಿಯನ್ನ ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ. ಆದರೆ ಇದೆಲ್ಲದಕ್ಕೂ ರುವಾರಿಯಾದ ವರಮಹಾಲಕ್ಷ್ಮಿ ಎಸ್ಕೇಪ್ ಆಗಿದ್ದಾಳೆ. ಈಕೆಗಾಗಿ ತೀವ್ರ ಶೋಧ ನಡೆಯುತ್ತಿದೆ.