ಬೆಂಗಳೂರು: ಕಳೆದೆರಡು ದಿನಗಳ ಹಿಂದೆ ನಡು ರಸ್ತೆಯಲ್ಲಿಯೇ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿ ಪರಾರಿಯಾಗಿದ್ದ ಪತಿಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ಕುಣಿಗಲ್ ಮೂಲದ ಮಂಜುನಾಥ್ ಬಂಧಿತ ಆರೋಪಿ.
ಮಂಜುನಾಥ್ ಜೂ. 30ರಂದು ರಾತ್ರಿ ಬೀದಿಯಲ್ಲಿ ಪತ್ನಿ ಹೇಮಾಳನ್ನು ಅಟ್ಟಾಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು. ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ ಉತ್ತರ ವಿಭಾಗ ಡಿಸಿಪಿ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದು, ಆರೋಪಿ ಮಂಜುನಾಥ್ ಪ್ರತಿನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದನು. ಅಲ್ಲದೇ ಬೇರೆ ಯುವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಇದರಿಂದ ಮೃತ ಹೇಮಾ ಪತಿಯಿಂದ ವಿಚ್ಛೇದನ ಪಡೆಯಲು ಚಿಂತನೆ ನಡೆಸಿದ್ದಳು. ಈ ಬಗ್ಗೆ ಆರೋಪಿ ಮಂಜುನಾಥ್ ಜೊತೆ ಚರ್ಚಿಸಿದ್ದಳು. ಆದರೆ ಆರೋಪಿ ಪತ್ನಿಗೆ ವಿಚ್ಛೇದನ ಕೊಡಲು ಒಪ್ಪಿಕೊಂಡಿಲ್ಲ ಎಂದು ತಿಳಿಸಿದರು.
ಹೀಗಾಗಿ ಪೊಲೀಸ್ ಠಾಣೆಗೆ ದೂರು ಕೊಡುತ್ತೀನಿ ಎಂದು ಹೇಮಾ ಮನೆಯಿಂದ ಹೊರ ಬಂದಿದ್ದಾಳೆ. ಈ ವೇಳೆ ನಿನ್ನ ಕೊಲೆ ಮಾಡಿ ನಾನೇ ಸ್ಟೇಷನ್ಗೆ ಹೋಗುತ್ತೀನಿ ಎಂದು ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ವೇಳೆ ಪತಿಯಿಂದ ತಪ್ಪಿಸಿಕೊಂಡು ಹೇಮಾ ಓಡಲು ಯತ್ನಿಸಿದ್ದಾಳೆ. ಆಗ ರಸ್ತೆಯಲ್ಲಿ ಹಿಂಬಾಲಿಸಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ಆರೋಪಿ ಮಂಜುನಾಥ್ ಎಸ್ಕೇಪ್ ಆಗಿದ್ದಾನೆ ಎಂದು ಡಿಸಿಪಿ ಪ್ರಕರಣದ ಬಗ್ಗೆ ವಿವರಿಸಿದ್ದಾರೆ.
ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.