ಬೆಂಗಳೂರು ; ಕರ್ನಾಟಕದಲ್ಲಿ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದೆ. ಬಿಜೆಪಿಯ 10 ಸದಸ್ಯರನ್ನು ಅಧಿವೇಶನದಲ್ಲಿ ಪಾಲ್ಗೊಳ್ಳದಂತೆ ಅಮಾನತು ಮಾಡಲಾಗಿದೆ. ಇದರ ನಡುವೆಯೇ ಶಿಕಾರಿಪುರದ ಶಾಸಕ ಬಿ. ವೈ. ವಿಜಯೇಂದ್ರ ದೆಹಲಿಗೆ ತೆರಳಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದರು.
ಕರ್ನಾಟಕ ಬಿಜೆಪಿ ಉಪಾಧ್ಯಕ್ಷ ಮತ್ತು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು.

ತಮ್ಮ ಟ್ವೀಟ್‌ನಲ್ಲಿ ಬಿ. ವೈ. ವಿಜಯೇಂದ್ರ, ‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಮಾನ್ಯ ಜೆ. ಪಿ. ನಡ್ಡಾಜೀ ಅವರನ್ನು ನಿನ್ನೆಯದಿನ ನವದೆಹಲಿಯಲ್ಲಿ ಭೇಟಿಮಾಡಿ ಆಶೀರ್ವಾದ ಕೋರಲಾಯಿತು’ ಎಂದು ಹೇಳಿದ್ದಾರೆ. ಭೇಟಿಯ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ, ‘ವಿಧಾನ ಸಭೆ ಹಾಗೂ ಹೊರಗೆ ಕಾಂಗ್ರೆಸ್ ವೈಫಲ್ಯ ಹಾಗೂ ಜನವಿರೋಧಿ ಕ್ರಮಗಳ ವಿರುದ್ಧ ಹೋರಾಟ ರೂಪಿಸುವ ಕುರಿತು ಹಾಗೂ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಪಡೆಯಲಾಯಿತು’ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಕುತೂಹಲ ಮೂಡಿಸಿದ ಭೇಟಿ; ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಜಯಿಸಿ ಅಧಿಕಾರ ಕಳೆದುಕೊಂಡು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳು ಕಳೆದರೂ ಸಹ ಬಿಜೆಪಿ ಘಟಕ ಇನ್ನೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿಲ್ಲ. ಪ್ರತಿಪಕ್ಷ ನಾಯಕನ ಆಯ್ಕೆಗೆ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲು ಕೇಂದ್ರ ಬಿಜೆಪಿಯ ವೀಕ್ಷಕರು ಆಗಮಿಸಿ ಶಾಸಕರ ಜೊತೆ ಸಭೆ ನಡೆಸಿ ವಾಪಸ್ ತೆರಳಿದ್ದಾರೆ. ರಾಜ್ಯದ ಬಜೆಟ್ ಅಧಿವೇಶವನ್ನು ಪ್ರತಿಪಕ್ಷ ನಾಯಕರು ಇಲ್ಲದೇ ಬಿಜೆಪಿ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ವಿಜಯೇಂದ್ರ ಜೆ. ಪಿ. ನಡ್ಡಾ ಭೇಟಿ ಮಾಡಿದ್ದಾರೆ.

2023ರ ಚುನಾವಣೆಗೆ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ. ವೈ. ವಿಜಯೇಂದ್ರ 81810 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿರುವ ಅವರು ಕರ್ನಾಟಕದಲ್ಲಿ ಬಜೆಟ್ ಅಧಿವೇಶನ ನಡೆಯುವಾಗ ಅದನ್ನು ಬಿಟ್ಟು ದೆಹಲಿಗೆ ಹೋಗಿದ್ದು ಕುತೂಹಕಕ್ಕೆ ಕಾರಣವಾಗಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವಧಿ ಪೂರ್ಣಗೊಂಡಿದೆ. ಅವರನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿಗಳಿವೆ. .ಇಂತಹ ಸಮಯದಲ್ಲಿ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆಯೇ? ಎಂಬ ಚರ್ಚೆಗಳಿದ್ದವು. ಇಂತಹ ಸಮಯದಲ್ಲಿಯೇ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ. ಬುಧವಾರ ಕರ್ನಾಟಕದ ವಿಧಾನಸಭೆ ಕಲಾಪದಲ್ಲಿ ಹೈಡ್ರಾಮ ನಡೆದಿತ್ತು. ಉಪ ಸಭಾಧ್ಯಕ್ಷರ ಮೇಲೆ ಬಿಜೆಪಿ ಸದಸ್ಯರು ಮಸೂದೆಯ ಕಾಗದವನ್ನು ಹರಿದು, ಎಸೆದು ದುರ್ವತನೆ ತೋರಿದರು. ಬಳಿಕ ಕಲಾಪ ಆರಂಭವಾದಾಗ ಸ್ಪೀಕರ್ ಯು. ಟಿ. ಖಾದರ್ ಸದನದಲ್ಲಿ ದುವರ್ತನೆ ತೋರಿದ ಹಿನ್ನಲೆಯಲ್ಲಿ ಬಿಜೆಪಿಯ 10 ಸದಸ್ಯರನ್ನು ಅಮಾನತು ಮಾಡಿದರು.