ಬೆಳ್ತಂಗಡಿ: ಎಂತಹ ಕಾಲ ಬಂತು ನೋಡಿ. ತಪ್ಪು ಮಾಡಿದರೆ ಬುದ್ಧಿ ಹೇಳಿ ತಿದ್ದುವ ಅಧಿಕಾರ ಕೂಡ ಇಲ್ಲ ತಂದೆಗೆ. ಬುದ್ಧಿ ಹೇಳಿದರು ಅನ್ನೋ ಒಂದೇ ಕಾರಣಕ್ಕೆ ಅಪ್ಪನನ್ನೇ ಕೊಂದು ಬಿಟ್ಟಿದ್ದಾನೆ ಪಾಪಿ ಮಗ. ಇಂತಹ ಘೋರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

ಪ್ರತಿದಿನ ಯಾವುದೇ ಜವಬ್ದಾರಿ ತೆಗೆದುಕೊಳ್ಳದೆ ಉಂಡಾಡಿ ಗುಂಡನಂತೆ ತಿರುಗಾಡಿ, ಕೊನೆಗೆ ಮೂಗಿನವರೆಗೆ ಕುಡಿದು ಮನೆಗೆ ಬರುತ್ತಿದ್ದ ಮಗ ದಯಾನಂದನಿಗೆ ಬುದ್ಧಿವಾದ ಹೇಳಿದ ಕಾರಣಕ್ಕೆ ತಂದೆ 75 ವರ್ಷದ ವಾಸು ಸಫಲ್ಯರನ್ನು ಕೊಲೆ ಮಾಡಲಾಗಿದೆ. ವಾಸು ಸಫಲ್ಯ ಅವರು ಬೆಳ್ತಂಗಡಿಯಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದರು. ಈ 75 ವರ್ಷದ ಇಳಿ ವಯಸ್ಸಿನಲ್ಲೂ ದುಡಿಯುತ್ತಿದ್ದ ವಾಸು ಸಫಲ್ಯ ಅವರ ಎರಡನೇ ಮಗ ದಯಾನಂದ್ ಯಾವುದೇ ಉದ್ಯೋಗ ಮಾಡದೆ ಅಬ್ಬೆ ಪಾರಿಯಾಗಿ ತಿರುಗಾಡಿಕೊಂಡು ಜೀವನ ನಡೆಸುತ್ತಿದ್ದ. ಅಷ್ಟೇ ಅಲ್ಲ, ಪ್ರತಿದಿನ ಕುಡಿದು ಮನೆಯಲ್ಲಿ ರಂಪಾಟವನ್ನೂ ಮಾಡುತ್ತಿದ್ದ. ಇದರಿಂದ ತೀವ್ರವಾಗಿ ನೊಂದಿದ್ದ ವಾಸು ಸಫಲ್ಯ ಆತನಿಗೆ ಪ್ರತಿನಿತ್ಯ ಬುದ್ಧಿವಾದವನ್ನು ಹೇಳುತ್ತಿದ್ದರು. ಯಾವುದಾದರೂ ಉದ್ಯೋಗಕ್ಕೆ ಸೇರಿ ಸುಧಾರಿಸಿಕೊಳ್ಳುವಂತೆಯೂ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.

ವಾಸು ಸಫಲ್ಯ ಅವರ ಮನೆ

ತಂದೆಯ ಬುದ್ಧಿವಾದದ ಮಾತು ಮಗ ದಯಾನಂದನಿಗೆ ಆಗುತ್ತಿರಲಿಲ್ಲ. ತಂದೆ – ಮಗನ ಮಧ್ಯೆ ಜಗಳವೂ ಆಗುತ್ತಿತ್ತು ಎನ್ನಲಾಗಿದೆ. ಇನ್ನು ಎಂದಿನಂತೆ ಇಂದು ಮುಂಜಾನೆ ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನಕ್ಕೆ ವಾಸು ಅವರು ವಾಕಿಂಗ್ ಹೋದ ಸಂದರ್ಭದಲ್ಲಿ ಕಾದು ಕುಳಿತ ಮಗ ದಯಾನಂದ್ ತಂದೆಗೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದರಿಂದ ಕುತ್ತಿಗೆ ಹಾಗೂ ತಲೆಗೆ ಗಂಭೀರವಾಗಿ ಗಾಯಗೊಂಡ ವಾಸು ಸಫಲ್ಯ ಅವರನ್ನು ಪೊಲೀಸರು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನು ಹಲ್ಲೆ ನಡೆಸಿ ಮಗ ದಯಾನಂದ್ ಅಲ್ಲಿಂದ ಪರಾರಿಯಾಗಿದ್ದಾನೆ. ದಯಾನಂದ್ ಹಲ್ಲೆ ನಡೆಸಿ ಪರಾರಿಯಾಗುತ್ತಿರುವುದನ್ನು ಸ್ಥಳೀಯರು ಗಮನಿಸಿದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಆರೋಪಿ ದಯಾನಂದ ಬಂಧನಕ್ಕೆ ಹುಡುಕಾಟ ನಡೆಸಿದ್ದಾರೆ.