ಮನೆಯಲ್ಲೇ ಸುಲಭವಾಗಿ ಬೆಳೆಯಬಹುದಾದ ಬಸಳೆ ಸೊಪ್ಪೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಬಸಳೆ ಸೊಪ್ಪು ಅನೇಕ ಪೋಷಕಾಂಶಗಳ ಅಗರವಾಗಿದ್ದು, ಆರೋಗ್ಯವನ್ನು ಕಾಪಾಡುವಲ್ಲಿ ಇದರ ಪಾತ್ರ ಬಹಳ ಮುಖ್ಯ.ಇದರಲ್ಲಿ ವಿಟಮಿನ್ ಎ,ಬಿ, ಕಬ್ಬಿಣಾಂಶ, ಪೋಟ್ಯಾಷಿಯಂ ಇತ್ಯಾದಿ ಹಲವಾರು ಉತ್ತಮ ಅಂಶವನ್ನು ಹೊಂದಿರುವಬಸಳೆ ಸೊಪ್ಪನ್ನು ಉಪಯೋಗಿಸಿ ಹಲವಾರು ಸವಿರುಚಿಗಳನ್ನು ತಯಾರಿಸಬಹುದು.
ಕರಾವಳಿ ಭಾಗದಲ್ಲಿ ಪ್ರತಿ ಮನೆಯಲ್ಲೂ ಬೆಳೆಯುವ ಬಸಳೆ ಸೊಪ್ಪಿನಲ್ಲಿ ವಿವಿಧ ಖಾದ್ಯಗಳನ್ನು ಕೂಡ ಮಾಡಬಹುದಾಗಿದೆ. ಸ್ವಾದಿಷ್ಟಕರವಾಗಿ ಬಸಳೆ ಪಕೋಡವನ್ನು ನಿಮ್ಮ ಮನೆಯಲ್ಲೇ ಮಾಡಿ ಸವಿಯಿರಿ..
ಬಸಳೆ ಸೊಪ್ಪಿನ ಪಕೋಡ
ಬೇಕಾಗುವ ಸಾಮಗ್ರಿಗಳು
ಹೆಚ್ಚಿದ ಬಸಳೆ ಸೊಪ್ಪು 1 ಕಪ್, ಕಡಲೇ ಹಿಟ್ಟು 1/2 ಕಪ್, ಮೈದಾ ಹಿಟ್ಟು 1/4 ಕಪ್, ಅಕ್ಕಿ ಹಿಟ್ಟು 1/4 ಕಪ್, ಹುಣಸೇ ಹಣ್ಣು (ಲಿಂಬೆ ಗಾತ್ರದಷ್ಟು), ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ 5 ರಿಂದ 6 ಎಸಳು, ಹಸಿಮೆಣಸಿನ ಕಾಯಿ 2 ರಿಂದ 3 , ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಹುಣಸೆ ಹಣ್ಣಿಗೆ ನೀರು ಹಾಕಿ ನೆನೆಸಿ ಹಿಚುಕಿ ಅದಕ್ಕೆ ಬಸಳೆ ಸೊಪ್ಪಿನ ಚೂರುಗಳನ್ನು ಹಾಕಿ ಅರ್ಧ ಗಂಟೆಗಳ ಕಾಲ ನೆನೆಸಿರಿ. ತದನಂತರ ಒಂದು ಪಾತ್ರೆಯಲ್ಲಿ ಕಡಲೇ ಹಿಟ್ಟು,ಮೈದಾ ಹಿಟ್ಟು,ಅಕ್ಕಿ ಹಿಟ್ಟು,ಬೆಳ್ಳುಳ್ಳಿ ಚೂರು,ಹಸಿಮೆಣಸಿನ ಕಾಯಿ ಹಾಕಿ ಗಟ್ಟಿಯಾಗಿ ಕಲಸಿರಿ.ನಂತರ ಹುಣಸೆ ರಸದಿಂದ ಹಿಂಡಿ ತೆಗೆದ ಬಸಳೆ ಸೊಪ್ಪನ್ನು ಸೇರಿಸಿ ಬೆರಸಿರಿ.ಸಣ್ಣ ಸಣ್ಣ ಉಂಡೆ ಮಾಡಿಟ್ಟುಕೊಂಡು, ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ಬಳಿಕ ಮಾಡಿಟ್ಟ ಉಂಡೆಯನ್ನು ಎಣ್ಣೆಗೆ ಹಾಕಿ ಕರಿದು ತೆಗೆಯಿರಿ. ಬಿಸಿ-ಬಿಸಿಯಾದ ಬಸಳೆ ಸೊಪ್ಪಿನ ಪಕೋಡ ಸವಿಯಲು ಸಿದ್ಧ.