ಸಾಮಾನ್ಯವಾಗಿ ಪಲಾವ್ ಅಂದರೆ ಎಲ್ಲರಿಗೂ ಗೊತ್ತು. ಅದೇಬ ರೀತಿ ಒಮ್ಮೆ ಈ ಕಾಶ್ಮೀರಿ ಪಲಾವ್ ರುಚಿಯನ್ನೂ ನೋಡಿ. ಒಂದು ಸಲ ಇದರ ರುಚಿ ನೋಡಿದರೆ ಮತ್ತೆ ಮತ್ತೆ ಮಾಡಿ ತಿನ್ನಬೇಕು ಅನ್ನೋ ಆಸೆ ನಿಮ್ಮಲ್ಲಿ ಹುಟ್ಟುತ್ತದೆ.

ಈ ಕಾಶ್ಮೀರಿ ಪಲಾವ್ ಮಾಡಲು ಏನೇನು ಬೇಕು ಅಂತ ನೋಡೊದಾದರೆ:

  • ಬಾಸುಮತಿ ಅಕ್ಕಿ : 4 ಲೋಟ
  • ಹುರುಳಿಕಾಯಿ : 100 ಗ್ರಾಂ
  • ಎಲೆಕೋಸು : 200 ಗ್ರಾಂ
  • ಕ್ಯಾರೆಟ್ : 4
  • ತೆಂಗಿನಕಾಯಿ : 1 ಹೋಳು
  • ಕೇಸರಿಬಣ್ಣ : ಅರ್ಧ ಸ್ಪೂನ್
  • ಲವಂಗ : 4
  • ಪಲಾವ್ ಎಲೆ : 2
  • ದಾಲ್ಚಿನ್ನಿ : 4 ಚೂರು
  • ಕಾಳು ಮೆಣಸು : 10
  • ಕಲ್ಲು ಹೂ : 1
  • ಹಸಿಶುಂಠಿ : 1 ಚೂರು
  • ಈರುಳ್ಳಿ : 4
  • ಹಸಿಮೆಣಸಿನಕಾಯಿ : 8
  • ಕೊತ್ತಂಬರಿ ಸೊಪ್ಪು : 8 ಎಸಳು
  • ತುಪ್ಪ : 2 ಸ್ಪೂನ್
  • ಅಡುಗೆ ಎಣ್ಣೆ : ಅರ್ಧ ಲೋಟ
  • ಸೋಂಪು : 1 ಸ್ಪೂನ್
  • ಉಪ್ಪು : ರುಚಿಗೆ ತಕ್ಕಷ್ಟು

ಕಾಶ್ಮೀರಿ ಪಲಾವ್ ಮಾಡುವ ವಿಧಾನ:
ಮೊದಲಿಗೆ ಮೆಣಸಿನಕಾಳು , ಲವಂಗ , ಪಲಾವ್ ಎಲೆ , ದಾಲ್ಚಿನ್ನಿ , ಕಲ್ಲು ಹೂ ಗಳನ್ನು ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಹುರಿಯಿರಿ. ನಂತರ ಅದನ್ನು ಪುಡಿ ಮಾಡಿಕೊಳ್ಳಿ. ಬಳಿಕ ಹಸಿ ಶುಂಠಿ , ಹಸಿ ಮೆಣಸಿನಕಾಯಿ , ಕೊತ್ತಂಬರಿ ಸೊಪ್ಪು , ತೆಂಗಿನಕಾಯಿ ತುರಿಯನ್ನು ರುಬ್ಬಿರಿ. ಅದಕ್ಕೆ ಕುಟ್ಟಿ ಪುಡಿ ಮಾಡಿದ ವಸ್ತುಗಳು ಮತ್ತು ಜಾಯಿಕಾಯಿ ಹಾಕಿ ಇನ್ನೊಮ್ಮೆ ರುಬ್ಬಿರಿ. ಹುರುಳಿಕಾಯಿಯನ್ನು ಉದ್ದುದ್ದ ಹೋಳುಗಳನ್ನಾಗಿ ಹೆಚ್ಚಬೇಕು. ಕ್ಯಾರೆಟ್ ಎಲೆಕೋಸುಗಳನ್ನು ಉದ್ದುದ್ದ ಹೋಳುಗಳನ್ನಾಗಿ ಹೆಚ್ಚಿರಿ. ಕುಕ್ಕರ್ ಒಲೆಯ ಮೇಲೆ ಇಟ್ಟು ಎಣ್ಣೆಯನ್ನು ಹಾಕಿರಿ. ಕಾದಮೇಲೆ ಒಲೆಯ ಉರಿ ಕಡಿಮೆ ಮಾಡಿ ಸೋಂಪು ಮತ್ತು ಹೆಚ್ಚಿದ ತರಕಾರಿಗಳನ್ನು ಹಾಕಿ ಹುರಿದುಕೊಳ್ಳಿ. ಬಳಿಕ ಸ್ವಲ್ಪ ನೀರು ಮತ್ತು ರುಚಿಗೆ ಬೇಕಾದಷ್ಟು ಉಪ್ಪು ಹಾಕಿ ಮೊಗಚು ಕೈಯಿಂದ ಕೆದಕಿರಿ. ಆಮೇಲೆ ಅದನ್ನು ಒಂದು ಪಾತ್ರೆಯಲ್ಲಿ ಹಾಕಿ, ಪುನಃ ಕುಕ್ಕರನ್ನು ಒಲೆಯ ಮೇಲಿಟ್ಟು ಸ್ವಲ್ಪ ಎಣ್ಣೆಯನ್ನು ಹಾಕಿ. ಕಾದಮೇಲೆ ಹೆಚ್ಚಿಕೊಂಡ ಈರುಳ್ಳಿ ಕರಿಬೇವು ಹಾಕಿ ಬಾಡಿಸಬೇಕು. ನಂತರ ಅದಕ್ಕೆ ಸ್ವಚ್ಛಗೊಳಿಸಿದ ಅಕ್ಕಿಯನ್ನು ಹಾಕಬೇಕು. ಆಮೇಲೆ ಅದಕ್ಕೆ ಕೇಸರಿ ಬಣ್ಣ, ರುಬ್ಬಿಕೊಂಡ ಮಸಾಲೆ , ರುಚಿಗೆ ತಕ್ಕಷ್ಟು ಉಪ್ಪು, ಎಂಟು ಲೋಟ ನೀರು ಸೇರಿಸಿ ಮೊಗಚು ಕೈಯಿಂದ ಕಲಸಿ ಮುಚ್ಚಳ ಮುಚ್ಚಿ ಕಾಯಿರಿ. ಎರಡು ವಿಶಲ್ ಸೌಂಡ್ ಬರುವ ತನಕ ಕಾದು ಒಲೆಯನ್ನು ಆರಿಸಿ. ಸ್ಟೀನ್ ಆರಿದ ಮೇಲೆ ಕುಕ್ಕರಿನ ಮುಚ್ಚಳ ತೆರೆದು , ಹುರಿದು ಬೇಯಿಸಿಕೊಂಡ ತರಕಾರಿಗಳನ್ನು ಮತ್ತು ಸ್ವಲ್ಪ ತುಪ್ಪವನ್ನೂ ಹಾಕಿ ಕಲಿಸಬೇಕು. ಆನಂತರ ಪಲಾವನ್ನು ಒಂದು ಪಾತ್ರೆಯಲ್ಲಿ ಹಾಕಿ ಅಲಂಕಾರಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ, ಇದೀಗ ರುಚಿ ರುಚಿಯಾದ ಕಾಶ್ಮೀರಿ ಪಲಾವ್ ರೆಡಿ