ಮೈಸೂರು : ಟಿ.ನರಸೀಪುರದಲ್ಲಿ ಹನುಮ ಜಯಂತಿ ಮಾಡುವ ವೇಳೆ ಗುಂಪು ಘರ್ಷಣೆ ನಡೆದಿದೆ. ಇದೇ ವೇಳೆ ಯುವಾ ಬ್ರಿಗೇಡ್ ಕಾರ್ಯಕರ್ತ ಕೊಲೆಯಾಗಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ವೇಣುಗೋಪಾಲ್ ನಾಯಕ್​ (32) ಮೃತ ಯುವಾ ಬ್ರಿಗೇಡ್ ಕಾರ್ಯಕರ್ತ. ಮೃತ ಕಾರ್ಯಕರ್ತ ಟಿ.ನರಸೀಪುರದ ಶ್ರೀರಾಂಪುರ ಕಾಲೋನಿ ನಿವಾಸಿಯಾಗುದ್ದು, ನಿನ್ನೆ (ಜು.09) ಹನುಮ ಜಯಂತಿ ವೇಳೆ ಗುಂಪುಗಳ ನಡುವೆ ವಾಗ್ವಾದ ಆಗಿತ್ತು. ವಾಗ್ವಾದ ತಾರಕಕ್ಕೆ ಏರಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
ನಟ ಪುನೀತ್ ರಾಜ್‌ಕುಮಾರ್ ಮತ್ತು ಹನುಮಾನ್ ಪೋಸ್ಟರ್‌ಗಳ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾದವು ಬ್ರಿಗೇಡ್ ಮೆರವಣಿಗೆಯ ಸಮಯದಲ್ಲಿ ಪ್ರಾರಂಭವಾಗಿದ್ದು, ಈ ವೇಳೆ ವೇಣುಗೋಪಾಲ್ ನಾಯಕ್‌ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಟಿ.ನರಸೀಪುರ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು, ಆಸ್ಪತ್ರೆ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿ ಮೃತ ಯುವಕನ ಅಂತಿಮ ದರ್ಶನ ಪಡೆದರು. ಬಳಿಕ ಮೃತ ಯುವಕನ ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಟಿ.ನರಸೀಪುರ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್​​ಪಿ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿ.ನರಸೀಪುರ ಠಾಣೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಕಂಠ ಮತ್ತು ಸಂದೇಶ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.