ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಗಳಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್‍ವುಡ್ ನಂಟಿರುವ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಎಂಟ್ರಿ ಕೊಟ್ಟಿದ್ದು, ಡ್ರಗ್ಸ್ ಪೆಡ್ಲರ್‍ಗಳಿಗೆ ಇಡಿ ಡ್ರಿಲ್ ಶುರುವಾಗಿದೆ.

ಡ್ರಗ್ಸ್ ಕೇಸ್‍ನ ಇಡೀ ತನಿಖಾ ವರದಿ ಪಡೆಯಲು ಗುರುವಾರ ಬೆಳಗ್ಗೆಯೇ ಸಿಸಿಬಿ ಕಚೇರಿಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಆಗಮಿಸಿದ್ದರು. ಇಡಿ ಅಧಿಕಾರಿಗಳು ಬೆಂಗಳೂರಿನಲ್ಲಿ ಸಿಸಿಬಿ ಕಚೇರಿಯಲ್ಲಿ ಡ್ರಗ್ಸ್ ಕಿಂಗ್ ಪಿನ್ ಎನ್ನಲಾಗುತ್ತಿರುವ ವೀರೇನ್ ಖನ್ನಾನನ್ನು ವಿಚಾರಣೆ ನಡೆಸುತ್ತಿದ್ದಾರೆ. ವೀರೇನ್ ಖನ್ನಾ ಬೆಂಗಳೂರು, ಮುಂಬೈ ಅಲ್ಲದೆ ಶ್ರೀಲಂಕಾದಲ್ಲಿಯೂ ಪೇಜ್ ತ್ರೀ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದಿರುವ ಇಡಿ ಅಧಿಕಾರಿಗಳು ಈಗ ವೀರೇನ್ ಖನ್ನಾ ಸೇರಿದಂತೆ ಆತನ ಜೊತೆಗೆ ಹಣದ ವಹಿವಾಟು ನಡೆಸಿದ್ದವರ ಮೇಲೆ ಕಣ್ಣು ನೆಟ್ಟಿದ್ದಾರೆ

ಇನ್ನು ಇವರ ಜೊತೆಗೆ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ನಟಿ ರಾಗಿಣಿ ದ್ವಿವೇದಿ ಮತ್ತು ನಟಿ ಸಂಜನಾ ಗಲ್ರಾನಿ ಅವರು ಕೂಡ ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಹೊಂದಿರುವುದು ಗೊತ್ತಾಗಿದೆ. ಬಂಧಿತ ನಟಿಯರಿಬ್ಬರೂ ವಿವಿಧ ಉದ್ಯಮಗಳಲ್ಲಿ ಬೇನಾಮಿ ಹೆಸರಿನಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಟಿ ರಾಗಿಣಿ ಕೆಪಿಎಲ್‍ನ ಬಳ್ಳಾರಿ ಡಸ್ಕರ್ಸ್ ಟೀಂನಲ್ಲಿ ಬಂಡವಾಳ ಹೂಡಿದ್ದಾರೆ. ನಟಿ ಸಂಜನಾ ಮತ್ತು ಪೃಥ್ವಿ ಶೆಟ್ಟಿ ವಿವಿಧ ವ್ಯವಹಾರಗಳಲ್ಲಿ ಜಂಟಿ ವ್ಯವಹಾರ ಮಾಡಿದ್ದು, ಇಲ್ಲಿಯೂ ಆದಾಯಕ್ಕೂ ಮೀರಿ ಹಣ ಹೂಡಿಕೆ ಮಾಡಲಾಗಿದೆ.

ಇನ್ನು ವೀರೇನ್ ಖನ್ನಾನ ಮನೆ ಮೇಲೆ ಸಿಸಿಬಿ ದಾಳಿ ಮಾಡಿದ ಸಂದರ್ಭದಲ್ಲಿ 7 ದೇಶಗಳ ವಿವಿಧ ಕರೆನ್ಸಿ ಪತ್ತೆಯಾಗಿತ್ತು. ವಿದೇಶಿ ವ್ಯವಹಾರಗಳಲ್ಲಿಯೂ ಖನ್ನಾ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಹವಾಲಾ ಹಣ ವರ್ಗಾವಣೆ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿಯರ ಐಷಾರಾಮಿ ಜೀವನ, ಅವರ ಖಾತೆಯಲ್ಲಿ ಆಗುತ್ತಿದ್ದ ಹಣದ ವಹಿವಾಟಿನ ಬಗ್ಗೆಯೂ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ.