ಮುಂಬೈ: ಬಾಲಿವುಡ್ ಡ್ರಗ್ ಕೇಸ್ ಸಂಬಂಧಪಟ್ಟಂತೆ ವಾಟ್ಸಾಪ್ ಮೆಸೆಜ್ ಆಧಾರಿಸಿ ನಟಿ ದೀಪಿಕಾ ಪಡುಕೋಣೆಗೆ ಎಸ್‍ಸಿಬಿ ನೋಟಿಸ್ ನೀಡಿತ್ತು. ಈ ಹಿನ್ನೆಲೆ ನಟಿ ದೀಪಿಕಾ ಪಡುಕೋಣೆ ಅವರು ಎನ್ ಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ.

credit- ANI

ಇಂದು ಬೆಳಗ್ಗೆ 9.45ರ ಸುಮಾರಿಗೆ ದೀಪಿಕಾ ಅವರು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ ಕಚೇರಿ ತಲುಪಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ದೀಪಿಕಾ ನಂತರ ನಟಿಯರಾದ ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಹಾಗೂ ದೀಪಿಕಾ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಕೂಡ ವಿಚಾರಣೆ ಎದುರಿಸಲಿದ್ದಾರೆ. ಈ ಎಲ್ಲರಿಗೂ ಎನ್ ಸಿ ಬಿ ಕಳೆದ ಬುಧವಾರವೇ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿತ್ತು. ಈಗಾಗಲೇ ದೀಪಿಕಾ ಮ್ಯಾನೆಜರ್ ಕರೀಷ್ಮಾ ಒಂದು ಬಾರಿ ವಿಚಾರಣೆಗೆ ಹಾಜರಾಗಿದ್ದರು. ಮತ್ತೆ ಅವರನ್ನು ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.

ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ನಂತರ ಡ್ರಗ್ಸ್ ಮಾಫಿಯಾ ಒಂದೊಂದು ಮಗ್ಗುಲನ್ನು ಪಡೆದುಕೊಳ್ತಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ, ನಟಿ ರಿಯಾ ಚಕ್ರವರ್ತಿ ಹಾಗೂ ಇತರ ಡ್ರಗ್ ಪೆಡ್ಲರ್ ಗಳ ಡ್ರಿಲ್ ನಡೆಯುತ್ತಿದೆ. ಇದರ ಜೊತೆ ಬಾಲಿವುಡ್‍ನ ಹಲವು ನಟ, ನಟಿಯರು ಹಾಗೂ ನಿರ್ಮಾಪಕರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿಬಿ ಈಗಾಗಲೇ ಹತ್ತಾರು ನಟಿಯರನ್ನು ವಿಚಾರಣೆ ನಡೆಸಿದೆ.

ಇದರ ಜೊತೆ , ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯವರೊಂದಿಗೆ ಡ್ರಗ್ಸ್ ಕುರಿತು ರಕುಲ್ ಪ್ರೀತ್ ಸಿಂಗ್ ಮಾತುಕತೆ ನಡೆಸಿದ್ದರು ಅನ್ನುವ ಮಾಹಿತಿ ಲಭ್ಯವಾಗಿತ್ತು. ಅದನ್ನು ರಕುಲ್ ಪ್ರೀತ್ ಸಿಂಗ್ ಒಪ್ಪಿಕೊಂಡಿದ್ದು, ಅದನ್ನು ನಾನು ಸೇವಿಸುತ್ತಿರಲಿಲ್ಲ, ಇದನ್ನು ರಿಯಾಗಾಗಿ ಇಟ್ಟುಕೊಂಡಿರುತ್ತಿದ್ದೆ ಎಂದು ಹೇಳಿದ್ದಾರೆ.