ಲಕ್ನೋ: “ಪತಿಯ ತಂದೆಯೇ ತುಂಬು ಗರ್ಭಿಣಿ ಸೊಸೆಯ ಮೇಲೆ ಅತ್ಯಾಚಾರ ಎಸಗಿ, ಈ ವಿಷಯವನ್ನು ಬಹಿರಂಗಪಡಿಸಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣ ಉತ್ತರ ಪ್ರದೇಶದ ಮುಝಫ್ಫರ್ ನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಏಳು ತಿಂಗಳ ಗರ್ಭಿಣಿಯಾಗಿದ್ದ 23 ವರ್ಷ ವಯಸ್ಸಿನ ಮಹಿಳೆ ಜುಲೈ 5ರಂದು ಒಬ್ಬಂಟಿಯಾಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಮಾವ ಈ ಕೃತ್ಯ ಎಸಗಿದ್ದಾನೆ ಎಂದು ಆಪಾದಿಸಲಾಗಿದೆ. ಈ ಸಂಬಂಧ ಸೆಪ್ಟೆಂಬರ್ 7ರಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿಷಯವನ್ನು ಪತಿಯ ಬಳಿ ಹೇಳಿದಾಗ ‘ತಂದೆಯ ಜತೆ ಅಕ್ರಮ ಸಂಬಂಧ ಹೊಂದಿದ ಕಾರಣದಿಂದ ನೀನು ಈಗ ನನ್ನ ತಂದೆಯ ಪತ್ನಿ’ ಎಂದು ಜರೆದು ಕೈಬಿಟ್ಟರು. ತನ್ನನ್ನು ನಿಂದಿಸಿ, ಹೊಡೆದು ಮನೆಯಿಂದ ಹೊರಹಾಕಿದರು” ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
“ನನ್ನ ಗೌರವ ಕಾಪಾಡಿಕೊಳ್ಳುವ ಸಲುವಾಗಿ ನಾನು ಮೌನವಾಗಿದ್ದೆ. ಪದೇ ಪದೇ ಮನವಿ ಮಾಡಿಕೊಂಡರೂ, ನಾನು ಏನು ತಪ್ಪು ಮಾಡದಿದ್ದರೂ, ಮನೆಗೆ ವಾಪಾಸು ಸೇರಿಸಿಕೊಳ್ಳಲು ಪತಿ ನಿರಾಕರಿಸಿದ್ದಾರೆ. ಈ ಕಾರಣದಿಂದ ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ” ಎಂದು ಮಹಿಳೆ ವಿವರಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮಾವನ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್ 376, 606 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪತಿಯ ವಿರುದ್ಧ ಸೆಕ್ಷನ್ 323ರ ಅಡಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ರಾಘವೇಂದ್ರ ಯಾದವ್ ಹೇಳಿದ್ದಾರೆ.