ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಸಚಿವ ಸಿಪಿ ಯೋಗೇಶ್ವರ್‌ ವಿರುದ್ಧ ಅವರ ಮೊದಲ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್‌ಗೆ ಜಾಲತಾಣಗಳಲ್ಲಿ ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಹೈಕೋರ್ಟ್‌ ನಿರ್ಬಂಧಿಸಿದೆ.

ಸಿಪಿ ಯೋಗೇಶ್ವರ್‌ ಪತ್ನಿ ಪಿವಿ ಶೀಲಾ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೇಮಂತ ಚಂದನಗೌಡರ್‌ ಅವರಿದ್ದ ಏಕಸದಸ್ಯ ಪೀಠ ಈ ಮಧ್ಯಂತರ ಆದೇಶ ನೀಡಿದೆ. ಪ್ರತಿವಾದಿಗಳಾದ ಇನ್‌ಸ್ಟಾಗ್ರಾಂ, ಎಕ್ಸ್‌ (ಟ್ವಿಟರ್‌), ಗೂಗಲ್‌ ಮತ್ತು ಯೂ-ಟ್ಯೂಬ್‌ ಜಾಲತಾಣಗಳಲ್ಲಿ ನಿಶಾ ಯೋಗೇಶ್ವರ್‌ ಅವರ ನಿಂದನಾತ್ಮಕ ಹೇಳಿಕೆಗಳನ್ನು ಅಪ್‌ಲೋಡ್‌ ಮಾಡಬಾರದು ಮತ್ತು ಈಗಾಗಲೇ ಪ್ರಸಾರ ಮಾಡಲಾಗಿರುವ ತುಣಕುಗಳನ್ನು ತಡೆ ಹಿಡಿಯಬೇಕು ಎಂದು ಆದೇಶ ನೀಡಿ ವಿಚಾರಣೆ ಮುಂದೂಡಿದೆ.

ಈ ಬಾರಿ ಚನ್ನಪಟ್ಟಣ ಉಪ ಚುನಾವಣೆಗೆ ಸಿಪಿ ಯೋಗೇಶ್ವರ್ ಸ್ಪರ್ಧಿಸಿರುವ ಬೆನ್ನಲ್ಲೇ ನಿಶಾ ಯೋಗೇಶ್ವರ್‌ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ, ಆಧಾರರಹಿತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅರ್ಜಿದಾರರಾದ ಪಿವಿ ಶೀಲಾ ಅವರು ಕೋರ್ಟ್ ಗಮನಕ್ಕೆ ತಂದಿದ್ದರು.

ಉಪ ಚುನಾವಣೆ ಕಣದಲ್ಲಿ ಅಬ್ಬರದ ಪ್ರಚಾರ
ಚನ್ನಪಟ್ಟಣದಲ್ಲಿ ಬಹಿರಂಗ ಪ್ರಚಾರಕ್ಕೆ ಇನ್ನೂ ಕೆಲವೇ ದಿನಗಳ ಬಾಕಿ ಉಳಿದಿರುವ ನಡುವೆಯೇ ಸೋಮವಾರ ಉಪ ಚುನಾವಣಾ ಅಖಾಡ ಒಕ್ಕಲಿಗ ನಾಯಕರಾದ ಡಿ ಕೆ ಶಿವಕುಮಾರ್‌ ಎಚ್‌ ಡಿ ಕುಮಾರಸ್ವಾಮಿ ನಡುವಿನ ಮಾತಿನ ಜಂಗೀಕುಸ್ತಿಗೆ ಸಾಕ್ಷಿಯಾಯಿತು. ಕೋಡಂಬಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 9 ಕಡೆಗಳಲ್ಲಿ ಡಿಸಿಎಂ ಪ್ರಚಾರ ಕೈಗೊಂಡು ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದದರು. ಇತ್ತ ಕೇಂದ್ರ ಸಚಿವ ಕುಮಾರಸ್ವಾಮಿ ಸಹ ಕೇಂದ್ರ ಸಚಿವರು ಹಾಗೂ ಸಂಸದರ ಜತೆ ಪುತ್ರನ ಪರ ಬಿರುಸಿನ ಪ್ರಚಾರ ಕೈಗೊಂಡ ಎಚ್‌ಡಿ ಕುಮಾರಸ್ವಾಮಿ ಡಿಕೆ ಶಿವಕುಮಾರ್‌ ವಿರುದ್ಧ ಮುಗಿಬಿದ್ದರು. ಬಹಿರಂಗ ಚುನಾವಣಾ ಅಖಾಡದಲ್ಲಿಅರ್ಜುನ್‌, ಅಭಿಮನ್ಯು, ಕಲ್ಲುಬಂಡೆ, ಲೂಟಿ, ಸ್ವಾರ್ಥ, ಕ್ಷೇತ್ರ ತ್ಯಾಗ. ರಾಷ್ಟ್ರ ಧ್ವಜ ಸೇರಿದಂತೆ ನಾನಾ ವಿಚಾರಗಳು ಚರ್ಚೆಗೊಳಪಟ್ಟವು.

ದೇವೇಗೌಡರ ಭೇಟಿ ರದ್ದು
ಉಪ ಚುನಾವಣಾ ಅಖಾಡದಲ್ಲಿಸೋಮವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಭಾಗಿಯಾಗುತ್ತಾರೆಂದು ಹೇಳಲಾಗಿತ್ತಾದರೂ ಅಂತಿಮ ಕ್ಷಣದಲ್ಲಿಅವರ ಭೇಟಿ ರದ್ದಾಗಿ ಮಂಗಳವಾರ ತಾಲೂಕಿನಲ್ಲಿಮೊಮ್ಮಗನ ಪರ ಪ್ರಚಾರ ನಡೆಸಲಿದ್ದಾರೆ. ಉಪ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ನಾಯಕರು ಮಾತಿನ ವರೆಸ ಸಹ ಬದಲಾಗಿದ್ದು, ಶಕ್ತಿ ಪ್ರದರ್ಶನ, ಮುಖಂಡರುಗಳ ಪಕ್ಷಾಂತರ ಪ್ರಕ್ರಿಯೆ ಇನ್ನಿಲ್ಲದ ವೇಗ ಪಡೆದುಕೊಂಡಿದೆ.