ಭೋಪಾಲ್: ಇನ್ನೇನೂ ಕೆಲವೇ ಕ್ಷಣದಲ್ಲಿ ಹಸೆಮಣೆ ಏರಬೇಕಾಗಿದ್ದ ವಧುವನ್ನು ಬ್ಯೂಟಿ ಪಾರ್ಲರಿನಲ್ಲಿಯೇ ಕೊಲೆಗೈದ ಘಟನೆಯೊಂದು ವರದಿಯಾಗಿದೆ.
ಮಧ್ಯ ಪ್ರದೇಶದ ರತ್ನಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ವಧುವನ್ನು ಸೋನು ಯಾದವ್ ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ (ಭಾನುವಾರ) ಜಿಲ್ಲೆಯ ಜೌರಾ ಪಟ್ಟಣದಲ್ಲಿ ವಧು ಮೇಕಪ್ ಮಾಡಿಸಿಕೊಳ್ಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಮಾಜಿ ಪ್ರಿಯಕರ ರಾಮ್ ಯಾದವ್ ಕೊಲೆ ಮಾಡಿರಬಹುದು. ಆತ ವಧುವಿನ ಕತ್ತನ್ನು ಕೊಯ್ದು ಕೊಲೆ ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಶಜಾಪುರ ಜಿಲ್ಲೆಯ ನಿವಾಸಿ ಸೋನು ವಿವಾಹ ದಿನದಂದು (ಭಾನುವಾರ) ಬೆಳಗ್ಗೆ ಕುಟುಂಬದೊಂದಿಗೆ ಜೌರಾ ಪಟ್ಟಣಕ್ಕೆ ಬಂದಿದ್ದಾಳೆ. ಸ್ವಲ್ಪ ಸಮಯದ ನಂತರ ಸೋನು ತನ್ನ ಸಂಬಂಧಿಯೊಂದಿಗೆ ಬ್ಯೂಟಿ ಪಾರ್ಲರ್ಗೆ ಹೋಗಿದ್ದಾಳೆ. ಸೋನು ಬ್ಯೂಟಿ ಪಾರ್ಲರ್ ತಲುಪಿದ ಕೂಡಲೇ ಶಂಕಿತ ಪ್ರಿಯಕರ ರಾಮ್ ಯಾದವ್ ಅನೇಕ ಬಾರಿ ಫೋನ್ ಮಾಡಿದ್ದಾನೆ. ಆದರೆ ಸೋನು ಆತನ ಎಲ್ಲಾ ಕರೆಗಳನ್ನು ನಿರ್ಲಕ್ಷಿಸಿದಳು ಎನ್ನಲಾಗಿದೆ.
ಈ ವೇಳೆ ರಾಮ್ ಯಾದವ್ ತನ್ನ ಸ್ನೇಹಿತನ ಮೊಬೈಲ್ ಫೋನಿನಿಂದ ಸೋನುಗೆ ಫೋನ್ ಮಾಡಿದ್ದಾನೆ. ಬೇರೆ ನಂಬರ್ ಆಗಿದ್ದರಿಂದ ಸೋನು ಫೋನ್ ರಿಸೀವ್ ಮಾಡಿ ಮಾತನಾಡಿದ್ದಾಳೆ. ಆಗ ರಾಮ್ ಯಾದವ್ ಆಕೆಯ ಮನವೊಲಿಸಿ ಸೋನು ಇರುವ ಸ್ಥಳವನ್ನು ತಿಳಿದುಕೊಂಡಿದ್ದಾನೆ. ಆಕೆಯ ಇರುವ ಸ್ಥಳ ತಿಳಿಯುತ್ತಿದ್ದಂತೆ, ರಾಮ್ ಯಾದವ್ ಬ್ಯೂಟಿ ಪಾರ್ಲರ್ಗೆ ಬಂದು ಸೋನುವಿನ ಕತ್ತನ್ನು ಕೊಯ್ದು ಕೊಲೆ ಮಾಡಿದ್ದಾನೆ. ಪರಿಣಾಮ ಸೋನು ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸದ್ಯಕ್ಕೆ ಈ ಕೊಲೆಗೆ ಸಹಾಯ ಮಾಡಿದ ಮತ್ತು ಗಡಿ ದಾಟಲು ಸಹಾಯ ಮಾಡಿದ ಆರೋಪಿಯ ಸ್ನೇಹಿತನನ್ನು ಬಂಧಿಸಲಾಗಿದೆ. ಆರೋಪಿ ರಾಮ್ ಯಾದವ್ನನ್ನು ಬಂಧಿಸಲು ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.