ಅದು ನೋಡೋಕೆ ಒಂದು ಕನ್ನಡಿ ಆದರೆ ಅದರ ಒಳಗೆ ಅಪರಾಧ ಲೋಕವೇ ಇದೆ. ಹೌದು, ತಮಿಳುನಾಡಿನ ಕೊಯಮತ್ತೂರಿನ ಲಾಡ್ಜ್ ನ ಬಾತ್‍ರೂಂನ ಕತೆ ಇದು. ಲಾಡ್ಜ್ ನ ಬಾತ್‍ರೂಮ್‍ನಲ್ಲಿದ್ದ ಸಹಜ ಕನ್ನಡಿಯ ಬಗ್ಗೆ ಅಲ್ಲಿನ ಪೊಲೀಸರಲ್ಲಿ ಅನುಮಾನ ಹುಟ್ಟುಹಾಕಿತ್ತು. ಹೀಗಾಗಿ ಕನ್ನಡಿಯನ್ನು ತಳ್ಳಿದಾಗ ದೊಡ್ಡ ಶಾಕ್ ಉಂಟಾಗಿತ್ತು.
ಆ ಸಣ್ಣ ಕನ್ನಡಿಯ ಹಿಂದೆಯೇ ಸಣ್ಣದಾದ ರಹಸ್ಯ ಕೋಣೆ ಇತ್ತು. ಅದರಲ್ಲಿ 22 ವರ್ಷದ ಮಹಿಳೆಯೊಬ್ಬಳನ್ನು ಬಂಧಿಸಿಡಲಾಗಿತ್ತು. ತಮ್ಮ ಕರ್ತವ್ಯ ಪಜ್ಞೆಯಿಂದ ಕೊಯಮತ್ತೂರು ಪೊಲೀಸರು ಕನ್ನಡಿಯೊಳಗಿನ ರಹಸ್ಯ ಭೇದಿಸಿ ಆ 22 ವರ್ಷ ವಯಸ್ಸಿನ ಬೆಂಗಳೂರು ಮೂಲದ ಮಹಿಳೆಯನ್ನು ರಕ್ಷಿಸಿ, ಇದೀಗ ಸರ್ಕಾರಿ ಮಹಿಳಾ ನಿವಾಸಕ್ಕೆ ಕಳುಹಿಸಿದ್ದಾರೆ. ಇನ್ನು ದಾಳಿಯ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಯಾವುದೋ ಮಾಹಿತಿ ಮೇರೆಗೆ ಮೇಟುಪಾಳ್ಯಂ ಉಪವಲಯದಲ್ಲಿ ಬರುವ ಕಲ್ಲಾರ್ ಬಳಿಯ ಊಟಿ ರಸ್ತೆ ಬದಿಯಲ್ಲಿ ಇರುವ ಸರಣ್ಯ ಲಾಡ್ಜ್ ಮೇಲೆ ಕೊಯಮತ್ತೂರುಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಪೊಲೀಸರು ಲಾಡ್ಜ್ ಒಳಗಿದ್ದ ಕನ್ನಡಿಯೊಳಗಿನ ಈ ರಹಸ್ಯ ಕೋಣೆಯೊಂದನ್ನು ಪತ್ತೆ ಹಚ್ಚಿದ್ದರು. ಅದಕ್ಕೆ ಕೇವಲ ಕಿಟಕಿಯಷ್ಟು ಚಿಕ್ಕದಾದ ಪ್ರವೇಶ ದ್ವಾರವಿತ್ತು. ಆ ಕೋಣೆಯು ಕಾಣದಂತೆ ಅದಕ್ಕೆ ಕನ್ನಡಿಯನ್ನು ಅಂಟಿಸಲಾಗಿತ್ತು. ಸಹಜವಾಘಿ ನೋಡಿದರೆ ಅದು ಯಾರಿಗೂ ಸಂಶಯ ಬಾರುವಂತಿರಲಿಲ್ಲ.
ಆದರೆ ಪೊಲೀಸರಿಗೆ ಸಂದೇಹ ಬಂದು ನೋಡಿದಾಗ ಅದರೊಳಗೆ ಸಿಂಗಲ್ ಬೆಡ್‍ರೂಂ ಕೋಣೆಯನ್ನು ಪತ್ತೆ ಮಾಡಿದ ಪೊಲೀಸರಿಗೆ ಅದರೊಳಗೆ 22 ವರ್ಷದ ಮಹಿಳೆ ಹಾಗೂ ಆಕೆಯನ್ನು ಹಿಡಿದಿಟ್ಟುಕೊಂಡಿದ್ದ 46 ವರ್ಷದ ಮಹೇಂದ್ರನ್ ಮತ್ತು 26 ವರ್ಷದ ಗಣೇಶನ್ ಸಿಕ್ಕಿಬಿದ್ದಿದ್ದರು. ಇನ್ನು ಆರೋಪಿ ಮಹೇಂದ್ರನ್ ಕಳೆದ ಮೂರು ವರ್ಷಗಳಿಂದ ಲಾಡ್ಜ್ ನಡೆಸುತ್ತಿದ್ದು, ಗಣೇಶನ್ ರೂಂ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಇಬ್ಬರೂ ಕೂಡ ವೆಲ್ಲೋರ್ ಮೂಲದವರು. ಇದೀಗ ಇವರ ವಿರುದ್ಧ ಮಾನವ ಕಳ್ಳಸಾಗಣೆ ಆರೋಪ ಕೇಳಿಬಂದಿದ್ದು, ಆರೋಪಿಗಳ ವಿರುದ್ಧ ವಿವಿಧ ಸೆಕ್ಸನ್ ಅಡಿಯಲ್ಲಿ ಕೇಸು ದಾಖಲಿಸಲಾಗಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಹಾಗು ಹೋಟೆಲ್ ಸೀಲ್ ಮಾಡಲಾಗಿದೆ.