ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ 110 ದಿನಗಳ ಬಳಿಕ ಸ್ಫೋಟಕ ಸತ್ಯ ರಿವೀಲ್ ಆಗಿದೆ. ಸುಶಾಂತ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಹೊರತು ಅದು ಕೊಲೆಯಲ್ಲ ಎಂದು ಏಮ್ಸ್ ತಿಳಿಸಿದೆ.
ದೇಹದಲ್ಲಿ ಯಾವುದೇ ವಿಷ ಪದಾರ್ಥ ಅಥವಾ ಕೆಮಿಕಲ್ ಇರಲಿಲ್ಲ. ಹಾಗಾಗಿ ಇದು ಕೊಲೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಬನಮ್ಮ ವರದಿಯನ್ನು ಸೆಪ್ಟೆಂಬರ್ 28ರಂದು ಸಿಬಿಐಗೆ ನೀಡಿದ್ದೇವೆ ಎಂದು ಖಾಸಗಿ ವಾಹಿನಿಯೊಂದರಲ್ಲಿ ಏಮ್ಸ್ ವೈದ್ಯ ಡಾ.ಸುಧೀರ್ ಗುಪ್ತ ಹೇಳಿದ್ದಾರೆ.
ಏಮ್ಸ್ ವೈದ್ಯರ ತಂಡವು ಅವರಲ್ಲಿ ಲಭ್ಯವಿರುವ ಶೇಕಡಾ 20 ರಷ್ಟು ಒಳಾಂಗಗಳ ಮಾದರಿಯನ್ನು ಆಧರಿಸಿ ಸುಶಾಂತ್ ಸಿಂಗ್ ರಜಪೂತ್ ಅವರ ಮರಣೋತ್ತರ ಮತ್ತು ಒಳಾಂಗಗಳ ವರದಿಗಳನ್ನು ಮರು ಪರಿಶೀಲನೆ ಮಾಡಿತ್ತು. ಇಷ್ಟೇ ಅಲ್ಲದೆ ವಿಧಿವಿಜ್ಞಾನ ಸಂಸ್ಥೆಗಳು ಲ್ಯಾಪ್‍ಟಾಪ್, ಎರಡು ಹಾರ್ಡ್ ಡಿಸ್ಕ್, ಕ್ಯಾಮೆರಾ ಮತ್ತು ಎರಡು ಮೊಬೈಲ್ ಫೋನ್‍ಗಳನ್ನು ಪರೀಕ್ಷಿಸಿವೆ ಎನ್ನಲಾಗಿದೆ.
ಸೆಪ್ಟೆಂಬರ್ 28ರಂದು ಸಿಬಿಐ ವರದಿ ಸಲ್ಲಿಸಿದ ಬಳಿಕ ಮಾತನಾಡಿದ್ದ ಡಾ.ಸುಧೀರ್ ಗುಪ್ತಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ತನಿಖೆಯ ಅಗತ್ಯವಿದೆ. ನಾವು ನಮ್ಮ ವರದಿಯನ್ನು ಸಲ್ಲಿಸಿದ್ದೇವೆ. ನಮ್ಮ ವರದಿಯ ವಿಶ್ಲೇಷಣೆಯನ್ನ ಸಿಬಿಐ ಮಾಡುತ್ತದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ್ರಾ ಅಥವಾ ಕೊಲೆ ಮಾಡಲಾಯ್ತಾ ಅನ್ನೋದನ್ನು ಸಹ ತನಿಖಾಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಹೇಳಿದ್ದರು.
ಮೂಲಗಳ ಪ್ರಕಾರ, ಸಿಬಿಐ ಆತ್ಮಹತ್ಯೆಯ ದೃಷ್ಟಿಕೋನದಿಂದ ತನ್ನ ತನಿಖೆಯನ್ನು ಮುಂದುವರಿಸಲಿದ್ದು, ಒಂದು ವೇಳೆ ಕೊಲೆಗೆ ಪುರಾವೆಗಳು ಲಭಿಸಿದರೆ ಐಪಿಸಿಯ ಸೆಕ್ಷನ್ 302 ಅಡಿಯಲ್ಲಿ ಸೇರಿಸಲಾಗುತ್ತದೆ ಎನ್ನಲಾಗುತ್ತಿದೆ . ಆದರೆ, ಸಿಬಿಐ 57 ದಿನಗಳಿಂದ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇದುವರೆಗೆ ಕೊಲೆಯೆಂದು ಸಾಭೀತಾಗುವಂತಹ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.
34 ವಯಸ್ಸಿನ ಸುಶಾಂತ್ ಜೂ.14ರಂದು ಮುಂಬೈನಲ್ಲಿರುವ ಅವರ ಅಪಾರ್ಟ್ ಮೆಂಟ್‍ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಶವಪರೀಕ್ಷೆಯ ಆಧಾರದ ಮೇಲೆ ಮುಂಬೈ ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಕರೆದಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೆÇೀಹಗಳು ಹಬ್ಬಿದ್ದವು. ನ್ಯಾಯಕ್ಕಾಗಿ ಅಭಿಯಾನ ನಡೆಸಲಾಗಿತ್ತು. ಸುಶಾಂತ್ ಸಿಂಗ್ ಕುಟುಂಬದವರು ಶಂಕೆ ವ್ಯಕ್ತಪಡಿಸಿದ ಕಾರಣ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿದೆ.
ಇನ್ನು, ಡಾ.ಸುಧೀರ್ ಗುಪ್ತಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟಿ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮನೋಶಿಂಧೆ, ನಾವು ಸಿಬಿಐ ತಂಡ ನೀಡುವ ಅಧಿಕಾರಿಗಳ ಹೇಳಿಕೆಯ ನಿರೀಕ್ಷೆಯಲ್ಲಿದ್ದೇವೆ. ಪ್ರಕರಣದ ತನಿಖೆ ಯಾವುದೇ ಏಜೆನ್ಸಿ ನಡೆಸಿದ್ರೂ ಸತ್ಯ ಮಾತ್ರ ಬದಲಾಗಲ್ಲ ಎಂದು ನಾವು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ನಾವು ಸತ್ಯದ ಮೇಲೆ ನಂಬಿಕೆ ಹೊಂದಿದ್ದು, ಸತ್ಯಮೇವ ಜಯತೆ ಎಂದಿದ್ದಾರೆ.