ಬಾಗಲಕೋಟೆ: ಒಂದೇ ಕುಟುಂಬದ ಮೂವರು ಮಕ್ಕಳೊಂದಿಗೆ ತಾಯಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಸಮೀಪದ ಜಗದಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಶಿವಾನಿ (13), ಶಂಕರ್ (9), ಸುಹಾಸಿನಿ (7) ಮೃತ ಮಕ್ಕಳು. ಮಕ್ಕಳಿಗೆ ವಿಷ ನೀಡಿದ ತಾಯಿ ಭಾಗೀರಥಿ ಚಿಕ್ಕಯ್ಯ ಮಠದಳನ್ನು ಮಹಲಿಂಗಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾಗೀರಥಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕಳೆದೆರಡು ವರ್ಷಗಳ ಹಿಂದೆ ಪತಿ ಚಿಕ್ಕಯ್ಯ ದಾನಯ್ಯ ಮಠದ ಬಂಡಿಗಣಿಯ ಹೊರವಲಯದಲ್ಲಿ ದುಷ್ಕರ್ಮಿಗಳಿಂದ ಬರ್ಬರವಾಗಿ ಕೊಲೆಯಾಗಿದ್ದರು. ಅಂದಿನಿಂದ ಭಾಗೀರಥಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಹೇಳಲಾಗುತ್ತಿದೆ. ಇದೀಗ ಮಕ್ಕಳನ್ನು ಕೊಂದ ಭಾಗೀರಥಿ ವಿಷ ಸೇವನೆ ಮಾಡಿದ್ದಾಳೆ ಎನ್ನಲಾಗಿದೆ. ಆದ್ರೆ ಪ್ರಕರಣಕ್ಕೆ ನೈಜ ಕಾರಣ ತಿಳಿದು ಬಂದಿಲ್ಲ.
ಶನಿವಾರ ಬೆಳಿಗ್ಗೆ 6.30 ರ ಸುಮಾರಿಗೆ ತಮ್ಮ ತೋಟದ ಮನೆಯಿಂದ ಜಗದಾಳ ಗ್ರಾಮದ ಹತ್ತಿರದ ದುರ್ಗಾದೇವಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ 10 ಗಂಟೆಯಾದರೂ ಮನೆಗೆ ವಾಪಸ್ ಬಾರದೆ ಇದ್ದಾಗ, ಮನೆಯವರು ಹುಡುಕಾಟ ನಡೆಸಿದ ನಂತರ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಭಾಗ್ಯಶ್ರೀ ತೀವ್ರ ಅಸ್ವಸ್ಥದಿಂದ ಬಳಲುತ್ತಿದ್ದರೆ ಮೂವರು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದವು.
ಮನೆಯಿಂದ ಬರುವಾಗ ಕುಡಿಯುವ ನೀರಿನಲ್ಲಿ ಉಣ್ಣೆಗೆ ಸಿಂಪಡಿಸುವ ಔಷಧಿಯನ್ನು ಮಿಶ್ರಣಗೊಳಿಸಿ ಮಕ್ಕಳಿಗೆ ನೀಡಿದ್ದಲ್ಲದೆ ತಾನೂ ಸಹ ಕುಡಿದಿರುವುದಾಗಿ ಮೆಲ್ನೋಟಕ್ಕೆ ಕಂಡು ಬಂದ ವಿಷಯವಾಗಿದೆ.
ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.