ಉತ್ತರ ಪ್ರದೇಶ: ಪತಿ ಜಗಳ ಆಡ್ತಾನೆ, ಪತಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ, ಪತಿ ಕುಡುಕ ಹೀಗೆ ಹತ್ತು ಹಲವು ಕಾರಣಗಳಿಗಾಗಿ ವಿಚ್ಚೇದನ ಕೋರುವ ಮಹಿಳೆಯರನ್ನು ನೋಡಿರ್ತೇವೆ. ಆದ್ರೆ ಇಲ್ಲೊಬ್ಬ ಯುವತಿ ಪತಿ ಅತಿಯಾಗಿ ಪ್ರೀತಿಸುತ್ತಾನೆ, ಸಹಾಯ ಮಾಡುತ್ತಾನೆ, ಜಗಳ ಆಡುವುದಿಲ್ಲ ಆದರೆ ಲೈಫ್ ಬೋರ್ ಆಗಿದೆ ಡೈವೋರ್ಸ್ ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾಳೆ. ಅಚ್ಚರಿಯಾದರೂ ನಿಜ.
ಹೌದು. ಉತ್ತರ ಪ್ರದೇಶದ ಶಂಭಾಲ್ ಜಿಲ್ಲೆಯ ಯುವತಿಯೊಬ್ಬಳು ಮದುವೆಯಾದ 18 ತಿಂಗಳೀಗೇ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾಳೆ. ಗಂಡ ಅಡುಗೆ ಮಾಡುತ್ತಾನೆ, ಕೆಲಸದಲ್ಲಿ ಸಹಾಯ ಮಾಡುತ್ತಿದ್ದಾನೆ. ತುಂಬಾ ಪ್ರೀತಿಸುತ್ತಾನೆ, ಸಿಟ್ಟಾಗಲ್ಲ, ಬೈಯಲ್ಲ, ಲೈಫ್ ಬೋರ್ ಆಗಿ ಹೋಗಿದೆ ಎಂದು ವಿಚಿತ್ರ ಅರ್ಜಿಯನ್ನು ಕೋರ್ಟ್ ಮುಂದೆ ಇಟ್ಟಿದ್ದಾಳೆ.
ಈ ಅರ್ಜಿಯನ್ನು ಗಮನಿಸಿದ ನ್ಯಾಯಾಧೀಶರು ಕಕ್ಕಾಬಿಕ್ಕಿಯಾಗಿಬಿಟ್ಟಿದ್ದರು. ತಮ್ಮ ಲೈಫ್‍ನಲ್ಲಿಯೇ ಇಂಥದ್ದೊಂದು ಅರ್ಜಿ ನೋಡಿಲ್ಲ ಎಂದು ಹೇಳಿ, ಈ ಕಾರಣಗಳನ್ನು ಹೊರತುಪಡಿಸಿ ವಿಚ್ಛೇದನ ಪಡೆಯಲು ಬೇರೆ ಯಾವುದಾದರೂ ಕಾರಣಗಳಿವೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಬೇರೆ ಯಾವುದೇ ಕಾರಣವಿಲ್ಲ ಎಂದು ಯುವತಿ ತಿಳಿಸಿದ್ದು, ವಿಚ್ಛೇದನಕ್ಕೆ ಇದು ಸಮರ್ಪಕ ಕಾರಣವಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಪರಸ್ಪರ ಇಬ್ಬರೂ ಕುಳಿತು ಸಮಸ್ಯೆ ಪರಿಹರಿಸಿಕೊಳ್ಳಿ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಅರ್ಜಿ ವಜಾ ಗೊಂಡ ಮೇಲೆ ಅಷ್ಟಕ್ಕೇ ಬಿಡದ ಯುವತಿ, ಸ್ಥಳೀಯ ಪಂಚಾಯಿತಿಯಲ್ಲಿ ಚರ್ಚಿಸಿದ್ದಾಳೆ. ಆದರೆ ಊರಿನ ಮುಖಂಡರು ಸಹ ಅಸಮರ್ಥತೆಯನ್ನು ಹೊರ ಹಾಕಿದ್ದಾರೆ.ನಾನು ಯಾವಾಗಲೂ, ಯಾವುದೇ ತಪ್ಪು ಮಾಡಿದರೂ, ಪತಿ ಏನೂ ಅನ್ನುವುದಿಲ್ಲ, ಕ್ಷಮಿಸಿಬಿಡುತ್ತಾನೆ. ನಾನು ಅವನೊಂದಿಗೆ ವಾದ ಮಾಡಿದರೂ ಸುಮ್ಮನಿರುತ್ತಾನೆ. ಎಲ್ಲದಕ್ಕೂ ಪತಿ ಒಪ್ಪಿಗೆ ಸೂಚಿಸುವ, ಸಹಿಸಿಕೊಳ್ಳುವ ಪತಿಯೊಂದಿಗೆ ನನಗೆ ಸಂಸಾರ ನಡೆಸಲು ಆಗುವುದಿಲ್ಲ ಎನ್ನುವುದು ಈಕೆಯ ದೂರು.
ಪತಿಯ ಅತಿ ಪ್ರೀತಿಯನ್ನು ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಪತಿ ಎಂದೂ ನನ್ನ ಜೊತೆ ಜಗಳವಾಡುವುದಿಲ್ಲ, ಯಾವುದಕ್ಕೂ ನಿರಾಸೆ ಮಾಡಿಲ್ಲ. ಈ ವಾತಾವರಣದಿಂದಾಗಿ ನನಗೆ ಉಸಿರುಗಟ್ಟಿದಂತಗುತ್ತಿದೆ. ವಿವಾಹವಾಗಿ 18 ತಿಂಗಳು ಕಳೆದರೂ, ಈ ವರೆಗೆ ಪತಿಯೊಂದಿಗೆ ಒಂದು ಬಾರಿಯೂ ಜಗಳವಾಡಿಲ್ಲ ಎಂದು ವರದಿಯಲ್ಲಿ ಯುವತಿ ಉಲ್ಲೇಖಿಸಿದ್ದಾಳೆ.ಅದೆಷ್ಟೋ ಮಹಿಳೆಯರು ಇಂತಹ ಗಂಡ ಸಿಗಲಿ ಎಂದು ಪ್ರಾರ್ಥಿಸುತ್ತಿರಬೇಕಾದರೆ ಈ ಯುವತಿ ಮಾತ್ರ ಜಗಳ ಮಾಡುವ ಗಂಡ ಬೇಕು ಅನ್ನುತ್ತಿರುವುದು ನಿಜವಾಗಲೂ ವಿಪರ್ಯಾಸ.